ಆಪ್‌ನ್ನು ಸೋಲಿಸಲು ಬಿಜೆಪಿ ನಕಲಿ ಮತಗಳನ್ನು ಖರೀದಿಸುತ್ತಿದೆ: ಕೇಜ್ರಿವಾಲ್

ಶನಿವಾರ, 25 ಅಕ್ಟೋಬರ್ 2014 (15:29 IST)
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು (ಎಎಪಿ) ಸೋಲಿಸಲು ನಕಲಿ ಮತಗಳನ್ನು ಖರೀದಿಸುವಂತೆ ಭಾರತೀಯ ಜನತಾ ಪಕ್ಷ ತಮ್ಮ ಶಾಸಕರಿಗೆ ನಿರ್ದೇಶನ ನೀಡಿದೆ ಎಂದು ಹೇಳುವುದರ ಮೂಲಕ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೇನುಗೂಡನ್ನು ಕಲಕಿದ್ದಾರೆ. 

ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 5000 ನಕಲಿ ಮತಗಳನ್ನು ಪಡೆಯಲು ಮತ್ತು ಆಪ್ ಪಕ್ಷಕ್ಕೆ ಸಿಗಲಿರುವ ಮತಗಳನ್ನು ನಷ್ಟಗೊಳಿಸಲು ದೆಹಲಿಯ ಎಲ್ಲ ಬಿಜೆಪಿ ಶಾಸಕರಿಗೆ ಬಿಜೆಪಿಯ ವರಿಷ್ಠ ನಾಯಕರು ನಿರ್ದೇಶನ ನೀಡಿದ್ದಾರೆ,"  ಎಂದು ಕೇಜ್ರಿವಾಲ್, ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. 
 
"ಹೊಸ ನಕಲಿ ಮತಕ್ಕೆ 1500 ರೂಪಾಯಿ ಲಂಚ, ಮತ್ತು ಒಂದು ಮತವನ್ನು ನಷ್ಟಗೊಳಿಸಲು ರೂ 200ವನ್ನು ನಿಗದಿ ಪಡಿಸಲಾಗಿದೆ. ಈ ಕಳೆದ ವಾರ ಬಿಜೆಪಿಗಾಗಿ ಈ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬರಿಂದ ಈ ಮಾಹಿತಿ ಲಭ್ಯವಾಗಿದೆ, " ಎಂದು ಅವರು ಟ್ವೀಟ್ ಮಾಡಿದ್ದಾರೆ.  
 
ಸೋಮವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಲಿರುವ ತಮ್ಮ ಪಕ್ಷದ ನಾಯಕರು ಈ ಕುರಿತು ಔಪಚಾರಿಕ ದೂರನ್ನು ನೀಡಲಿದ್ದಾರೆ ಎಂದು ಆಪ್ ನಾಯಕ ತಿಳಿಸಿದ್ದಾರೆ. 
 
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೆಹಲಿ ವಿಧಾನಸಭಾ ಚುನಾವಣೆಯನ್ನು ಮುಂದೂಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 
 
ಕುದುರೆ ವ್ಯಾಪಾರದ ಮೂಲಕ  ಬಿಜೆಪಿ ದೆಹಲಿಯಲ್ಲಿ ಸರಕಾರ ರಚಿಸಲು ಪ್ರಯತ್ನಿಸುತ್ತಿದೆ ಎಂದು ಈ ಮೊದಲು ಅವರು ಆರೋಪಿಸಿದ್ದರು. 

ವೆಬ್ದುನಿಯಾವನ್ನು ಓದಿ