ಸೋಲಿನ ಭಯದಿಂದ ಬಿಜೆಪಿ ಬೆಂಬಲಿಗರ ಹಲ್ಲೆ: ಕೇಜ್ರಿವಾಲ್ ಆರೋಪ

ಮಂಗಳವಾರ, 29 ಏಪ್ರಿಲ್ 2014 (20:06 IST)
ಬಿಜೆಪಿ ಬೆಂಬಲಿಗರು ಆಪ್ ಬೆಂಬಲಿಗರನ್ನು ಗುರಿಯಾಗಿರಿಸಿಕೊಂಡು ಹಲ್ಲೆ ಮಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. 
 
ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಿಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುತ್ತಿರುವುದರಿಂದಲೇ ಆಮ್ ಆದ್ಮಿ ಪಕ್ಷದ ಬೆಂಬಲಿಗರ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಂದು ಆರೋಪಿಸಿದರು. 
 
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದ ವೇಳೆ ಅರವಿಂದ್ ಕೇಜ್ರಿವಾಲ್, ಆಮ್ ಆದ್ಮಿ ಟೋಪಿ ಧರಿಸುವ ಜನ ಸಾಮಾನ್ಯರನ್ನೂ ಗುರಿಮಾಡಿ ಹಲ್ಲೆ ನಡೆಸುವ ಮೂಲಕ ಪುಣ್ಯಕ್ಷೇತ್ರ ವಾರಣಾಸಿಯಲ್ಲಿ ಬಿಜೆಪಿ ಬೆಂಬಲಿಗರು ಭಯಭೀತ ವಾತಾವರಣ ಸೃಷ್ಟಿಸುತ್ತಿದ್ದು, ಈ ರೀತಿ ಅಡ್ಡದಾರಿ ಹಿಡಿದು ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ ಎಂದರು. 
 
ಎಎಪಿಗೆ ಬೆಂಬಲ ಸೂಚಿಸಿ ಹಲವಾರು ಆಟೋ ಚಾಲಕರು ತಮ್ಮ ಆಟೋಗಳ ಹಿಂದೆ ಎಎಪಿ ಭಿತ್ತಿಪತ್ರಗಳನ್ನು ಅಂಟಿಸಿಕೊಂಡಿದ್ದರೆ ಇದನ್ನು ಸಹಿಸದ ಬಿಜೆಪಿ ಹುಡುಗರು ಆ ಭಿತ್ತಿಪತ್ರಗಳನ್ನು ಕಿತ್ತು ಹಾಕುತ್ತಿದ್ದಾರೆ. ಬಿಜೆಪಿ ಹುಡುಗರ ಪುಂಡಾಟಿಕೆಯಿಂದ ವಾರಾಣಾಸಿ ಜನರು ಬೇಸತ್ತಿದ್ದು, ಪ್ರಸಕ್ತ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು. 
 
ವಾರಣಾಸಿಯಲ್ಲಿ ಪುಂಡಾಟಿಕೆ ನಡೆಸುತ್ತಿರುವ ಬಿಜೆಪಿ ಹುಡುಗರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಮುಖಂಡ ನಳಿನ್ ಕೊಹ್ಲಿ ಭರವಸೆ ನೀಡಿದ್ದು, ಆದರೆ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಳ್ಳದ ಅವರು, ಬಿಜೆಪಿ ಹುಡುಗರು ಮಾತ್ರ ಗಲಾಟೆ ಮಾಡುತ್ತಿಲ್ಲ. ಬದಲಿಗೆ ಎಎಪಿ ಬೆಂಬಲಿಗರು ಕೂಡ ಗಲಾಟೆ ಸೃಷ್ಟಿಸುವ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಸಬೂಬ್ ನೀಡುತ್ತಿದ್ದಾರೆ ಎಂದರು. 
 

ವೆಬ್ದುನಿಯಾವನ್ನು ಓದಿ