ಖಾಡ್ಸೆ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ತಯಾರಿ

ಶುಕ್ರವಾರ, 3 ಜೂನ್ 2016 (17:21 IST)
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಲ್ಲಿಸಿರುವ ವರದಿಯ ಆಧಾರದ ಮೇಲೆ ಭೃಷ್ಟಾಚಾರದ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರ ಕಂದಾಯ ಸಚಿವ ಏಕನಾಥ್ ಖಾಡ್ಸೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿ ಮುಂದಾಗಿದೆ. 
 
ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಸೇರಿದ 40 ಕೋಟಿ ರೂ. ಮೌಲ್ಯದ ವಿವಾದಿತ ಭೂಮಿಯನ್ನು ಸಚಿವ ಖಾಡ್ಸೆ ತಮ್ಮ ಪತ್ನಿ ಮತ್ತು ಅಳಿಯನ ಹೆಸರಿನಲ್ಲಿ 3.75 ಕೋಟಿ ರೂಪಾಯಿಗೆ ಖರೀದಿಸಿದ್ದರು ಎಂಬ ಆರೋಪವಿದೆ. ಅವರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರ ಜತೆ ಸಂಪರ್ಕ ಹೊಂದಿರುವ ಆರೋಪವನ್ನು ಕೂಡ ಎದುರಿಸುತ್ತಿದ್ದಾರೆ. 
 
ತಮ್ಮ ಸಂಪುಟದ ಸಚಿವರ ವಿರುದ್ಧದ ಆರೋಪಗಳ ಕುರಿತ ವರದಿಯನ್ನು ಮಹಾ ಸಿಎಂ ಫಡ್ನವೀಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಹಸ್ತಾಂತರಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸುತ್ತಿದ್ದ ಬಿಜೆಪಿ ಉನ್ನತ ನಾಯಕರೊಬ್ಬರು ಏನಾದರೂ ಮಾಡಬೇಕಿದೆ(ಕುಚ್ ಕರ್ನಾ ಪಡೆಗಾ) ಎಂದಿದ್ದಾರೆ.
 
ಖಾಡ್ಸೆ ಅವರನ್ನು ತಕ್ಷಣಕ್ಕೆ ವಜಾ ಮಾಡಬಹುದು ಅಥವಾ ಅವರನ್ನು ಮಹತ್ವವಲ್ಲದ ಸ್ಥಾನಕ್ಕೆ ವರ್ಗಾಯಿಸುವ ಸಾಧ್ಯತೆಗಳು ಸಹ ಇವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ