ನೇತಾಜಿ ದಾಖಲೆಗಳನ್ನು ಬಿಡುಗಡೆ ಮಾಡುವ ಹಿಂದೆ ಬಿಜೆಪಿ ಸಂಚಿದೆ: ನಿತೀಶ್ ಕುಮಾರ್

ಭಾನುವಾರ, 24 ಜನವರಿ 2016 (12:29 IST)
ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಭೋಸ್ ದಾಖಲೆಗಳನ್ನು ಬಿಡುಗಡೆ ಮಾಡುವ ಹಿಂದೆ ಬಿಜೆಪಿ ಷಡ್ಯಂತ್ರವಿದೆ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಶಯ ವ್ಯಕ್ತಪಡಿಸಿದ್ದಾರೆ.
 
ಸ್ವಾತಂತ್ರ್ಯ ಹೋರಾಟಕ್ಕೂ ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆದಾಗ್ಯೂ ನೇತಾಜಿಯವರ ದಾಖಲೆಗಳನ್ನು ಬಿಡುಗಡೆಗೊಳಿಸಿ ವಿಭಿನ್ನ ಸಿದ್ದಾಂತಗಳ ಮಧ್ಯೆ ಬಿಕ್ಕಟ್ಟು ತರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
 
ವಿಭಿನ್ನ ಸಿದ್ದಾಂತಗಳ ಮಧ್ಯೆಯೂ ಸ್ವಾತಂತ್ರ್ಯ ಹೋರಾಟಗಾರರು ಆಂಗ್ಲರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎನ್ನುವುದು ಬಿಜೆಪಿ ನಾಯಕರು ಮರೆತಂತಿದೆ ಎಂದರು.
 
ಸ್ವಾತಂತ್ರ್ಯ ಹೋರಾಟದ ರೂವಾರಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಅವರ ಬೆಂಬಲಿಗರು ಅಹಿಂಸೆ ಎನ್ನುವ ಸಿದ್ದಾಂತವನ್ನು ಮುಂದಿಟ್ಟುಕೊಂಡು ಬ್ರೀಟಿಷರ ವಿರುದ್ಧ ಹೋರಾಟ ಮಾಡಿದರು. ಏತನ್ಮಧ್ಯೆ ನೇತಾಜಿಯವರದ್ದು ಕಾಂತ್ರಿಕಾರಿ ಹೋರಾಟವಾಗಿದ್ದರೂ ಉಭಯ ನಾಯಕರು ಆಂಗ್ಲರ ಕಪಿಮುಷ್ಠಿಯಿಂದ ದೇಶವನ್ನು ಸ್ವತಂತ್ರವಾಗಿಸುವ ಒಂದೇ ಗುರಿ ಹೊಂದಿದ್ದರು ಎಂದರು. 
 
ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರವಿಲ್ಲದ ಬಿಜೆಪಿ ನಾಯಕರು ಕೇವಲ ರಾಜಕೀಯ ಲಾಭಕ್ಕಾಗಿ ಬಿಕ್ಕಟ್ಟು ಸೃಷ್ಟಿಸುವ ಸಂಚು ರೂಪಿಸಿದ್ದಾರೆ  ಎಂದು ಆರೋಪಿಸಿದರು.
 
ಇದಕ್ಕಿಂತ ಮೊದಲು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ರಾಜ್ಯಪಾಲ ರಾಮ್ ನಾಥ್ ಕೋವಿಂದ್, 119ನೇ ಜನ್ಮದಿನಾಚರಣೆ ಅಂಗವಾಗಿ ಶೃದ್ಧಾಂಜಲಿ ಸಲ್ಲಿಸಿದರು.  

ವೆಬ್ದುನಿಯಾವನ್ನು ಓದಿ