ಎನ್‌ಡಿಎ ಮೈತ್ರಿಕೂಟಕ್ಕೆ 147 ಸ್ಥಾನ: ಸಮೀಕ್ಷೆ

ಮಂಗಳವಾರ, 6 ಅಕ್ಟೋಬರ್ 2015 (15:35 IST)
ಬಿಹಾರ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 147 ಸ್ಥಾನಗಳನ್ನು ಗಳಿಸಲಿದ್ದು, ಲಾಲು- ನಿತೀಶ್- ಕಾಂಗ್ರೆಸ್ ಮಹಾ ಮೈತ್ರಿಕೂಟ ಕೇವಲ 64 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಸಮೀಕ್ಷೆಯೊಂದು ಭವಿಷ್ಯ ನುಡಿದಿದೆ. 

ಝೀ ಮೀಡಿಯಾ ಗ್ರೂಪ್ ನಡೆಸಿರುವ ಸಮೀಕ್ಷೆಯ ಪ್ರಕಾರ  53.8% ಜನರು ಮುಂದಿನ ಸರ್ಕಾರ ಎನ್‌ಡಿಎ ನೇತೃತ್ವದಲ್ಲಿ ರೂಪಿತಗೊಳ್ಳಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, 40.2 ಪ್ರತಿಶತ ಬಿಹಾರ್ ನಾಗರಿಕರು ಮಹಾ ಮೈತ್ರಿಕೂಟ ಅಧಿಕಾರಕ್ಕೇರಲಿದೆ ಎಂದು ಹೇಳಿದ್ದಾರೆ. 
 
ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿಯವರ ಎಚ್ಎಎಮ್, ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ( ಎಲ್‌ಜೆಪಿ) ಮತ್ತು ಕೇಂದ್ರ ಸಚಿವ ಖುಶ್ವಹಾರವರ ರಾಷ್ಟ್ರೀಯ ಲೋಕ ಸಮತಾ ಪಕ್ಷಗಳು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗಗಳಾಗಿವೆ. 
 
ಮಹಾ ಮೈತ್ರಿಕೂಟ, ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ, ನಿತೀಶ್ ಕುಮಾರ್ ನೇತೃತ್ವದ ಜನತಾ ದಳ(ಯು) ಕಾಂಗ್ರೆಸ್ ಮತ್ತು ಜನತಾ ದಳ( ಜಾತ್ಯಾತೀತ)ಗಳನ್ನು ಒಳಗೊಂಡಿದೆ. 
 
ನಕ್ಸಲ್ ಪೀಡಿತ ಪ್ರದೇಶಗಳ ಜನರಲ್ಲಿ 54.6 ರಷ್ಟು ಜನರು ಎನ್‌ಡಿಎ ಬಗ್ಗೆ ಒಲವು ತೋರಿಸಿದ್ದರೆ, 39.7 ರಷ್ಟು ನಾಗರಿಕರು ಮಹಾ ಮೈತ್ರಿಕೂಟ ಗೆಲ್ಲುವುದಾಗಿ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ.
 
ರಾಜಕೀಯವಾಗಿ ಬಲಿಷ್ಠವಾಗಿರುವ ಯಾದವ್ ಸಮುದಾಯವನ್ನು ಕೇಳಲಾಗಿ 43.7 ಪ್ರತಿಶತ ಜನರು ಎನ್‌ಡಿಎ ಗೆಲ್ಲುವುದಾಗಿ ತಿಳಿಸಿದರೆ, 50.2% ಜನರು  ಮಹಾ ಮೈತ್ರಿಕೂಟ ಜಯವನ್ನು ಗಳಿಸುವುದಾಗಿ ಭವಿಷ್ಯ ನುಡಿದಿದ್ದಾರೆ. 

ವೆಬ್ದುನಿಯಾವನ್ನು ಓದಿ