ಇಂದೇ ಮಹಾರಾಷ್ಟ್ರ, ಹರಿಯಾಣಾ ಮುಖ್ಯಮಂತ್ರಿಗಳ ಘೋಷಣೆ ಮಾಡಲಿರುವ ಬಿಜೆಪಿ!

ಸೋಮವಾರ, 20 ಅಕ್ಟೋಬರ್ 2014 (12:25 IST)
ಮಹಾರಾಷ್ಟ್ರ ಮತ್ತು ಹರಿಯಾಣಾ ವಿಧಾನಸಭಾ ಚುನಾವಣೆಯಲ್ಲಿ ಭಾರಿ ವಿಜಯದ ನಂತರ ಬಿಜೆಪಿ ಪಕ್ಷದ ಮುಂದಿನ ದೊಡ್ಡ  ಕಗ್ಗಂಟು ಮುಖ್ಯಮಂತ್ರಿಗಳ ಆಯ್ಕೆಯ ಕುರಿತಾಗಿದೆ.

ಹರಿಯಾಣಾದಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಬಿಜೆಪಿ ಅಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲಿದೆ. ಆದರೆ ಮಹಾರಾಷ್ಟ್ರದಲ್ಲಿ ಬಹುಮತದಿಂದ ಹಿಂದುಳಿದಿರುವ ಕಮಲಕ್ಕೆ ಬೇರೆ ಪಕ್ಷದ ಬೆಂಬಲದ ಅಗತ್ಯವಿದೆ. ಮಹಾರಾಷ್ಟ್ರದ 288 ಸ್ಥಾನಗಳ ಪೈಕಿ 123 ಬಿಜೆಪಿ ಪಾಲಾಗಿದ್ದು ಸರಕಾರ ರಚಿಸಲು ಇನ್ನೂ 22 ಸ್ಥಾನಗಳ ಅಗತ್ಯವಿದೆ. ಹರಿಯಾಣದಲ್ಲಿ 90 ಸ್ಥಾನಗಳ ಪೈಕಿ 47 ಬಿಜೆಪಿಯ ತೆಕ್ಕೆಗೆ ಸೇರಿರುವುದರಿಂದ ಇಲ್ಲಿ ಕಮಲ ನಿರಾತಂಕವಾಗಿದೆ.
 
ಮಹಾರಾಷ್ಟ್ರದಲ್ಲಿ ಬಿಜೆಪಿ ಅಧ್ಯಕ್ಷ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಪಟ್ಟದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಕೇಂದ್ರದ ಮಾಜಿ ಸಚಿವ ದಿವಂಗತ ಗೋಪಿನಾಥ್ ಮುಂಡೆ ಪುತ್ರಿ ಪಂಕಜಾ ಅವರು ಸಹ ಮುಖ್ಯಮಂತ್ರಿ ಪಟ್ಟದ ಕುರಿತು ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಕ್ಯಾಪ್ಟನ್ ಅಭಿಮನ್ಯು ಸಿಂಗ್ ಹರಿಯಾಣ ಮುಖ್ಯಮಂತ್ರಿ ಹುದ್ದೆಗೇರಬಹುದೆಂದು ಹೇಳಲಾಗುತ್ತಿದೆ. 
 
ಏತನ್ಮಧ್ಯೆ, ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಗೃಹ ಸಚಿವರಾದ ರಾಜನಾಥ್ ಸಿಂಗ್ ರಾಜ್ಯದಲ್ಲಿ ಪಕ್ಷದ ವೀಕ್ಷಕನಾಗಿ ಮಂಗಳವಾರ ಮುಂಬೈ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
 
ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಲು, ಬಿಜೆಪಿ ಸಂಸದೀಯ ಮಂಡಳಿಯ ನಿರ್ಧಾರದ ಭಾಗವಾಗಿ ಹಿರಿಯ ನಾಯಕ ಜೆಪಿ ನಡ್ಡಾ ಜೊತೆಗೆ ಪಕ್ಷದ ವೀಕ್ಷಕರಾಗಿ ಅವರು ಮುಂಬೈಗೆ ಭೇಟಿ ನೀಡಲಿದ್ದಾರೆ. ಹರಿಯಾಣಾದ ಮುಖ್ಯಮಂತ್ರಿಯ ಕುರಿತು ಸಹ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ