ಇನ್ಮುಂದೆ ಬಿಜೆಪಿ ಸಂಸದರು ಸೋಮಾರಿಗಳಾಗುವಂತಿಲ್ಲ, ಮಾರ್ಕ್ಸ್ ಕಾರ್ಡ್ ಸಿದ್ದವಾಗುತ್ತಿದೆ

ಗುರುವಾರ, 31 ಜುಲೈ 2014 (15:16 IST)
ಸಂಸತ್ ಸದಸ್ಯರಾಗಿ ಆಯ್ಕೆ ಆದರೆ ಸಾಲದು. ನಿಮ್ಮ ಕೆಲಸವನ್ನು ನೋಡಿ ಅದರ ಪ್ರಗತಿ ಪರಿಶೀಲನೆ ಮಾಡುತ್ತೇವೆ. ಹೀಗಾಗಿ ನಿಮ್ಮ ಕರ್ತವ್ಯವನ್ನು ಕಡ್ಡಾಯವಾಗಿ ಮಾಡಿ ಎಂದು ಬಿಜೆಪಿ ಹೈಕಮಾಂಡ್ ಆದೇಶ ನೀಡಿದೆ.
 
ಹೀಗೆಂದು ಪಕ್ಷದ ಸಂಸದರಿಗೆ ಖಡಕ್ ಆಗಿ ತಿಳಿಸಲಾಗಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ. ಕರ್ತವ್ಯ ನಿರ್ಲಕ್ಷಿಸಿದರೆ ನೇರವಾಗಿ ಪ್ರಧಾನಿ ಮೋದಿಗೇ ವರದಿ ಹೋಗಲಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿರುವ ಪಕ್ಷದ ಸಂಸದರ ನಡೆ ತಿಂಗಳ ವರದಿ' ಸಿದ್ಧವಾಗುತ್ತಿದೆ. ಹೀಗಾಗಿ ಎರಡೂ ಸದನದಲ್ಲಿರುವ ಸುಮಾರು 320 ಸಂಸದರ ಸಾಮರ್ಥ್ಯವನ್ನು ಇಲ್ಲಿ ನಮೂದಿಸಲಾಗುತ್ತದೆ.
 
ವರದಿಯಲ್ಲಿ ಏನಿರಲಿದೆ?: ಸಂಸತ್‌ನಲ್ಲಿ ಬಿಜೆಪಿ ಸಂಸದರು ಯಾವ ರೀತಿ ಪ್ರಶ್ನೆಗಳನ್ನು ಕೇಳಿದ್ದಾರೆ, ಚರ್ಚೆಯಲ್ಲಿ ಭಾಗವಹಿಸಿದ ಕ್ರಮದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ. ಸದನ ಇಲ್ಲದೇ ಇದ್ದರೂ ಅವರು ಯಾವ ರೀತಿ ವರ್ತಿಸುತ್ತಾರೆ ಎಂಬ ಬಗ್ಗೆಯೂ ಪ್ರಸ್ತಾಪವಾಗಲಿದೆ. 
 
ಸಂಪುಟ ವಿಸ್ತರಣೆ ಅಥವಾ ಸದನದಲ್ಲಿ ಪ್ರಮುಖ ಚರ್ಚೆಯ ಸಂದರ್ಭ ಇವರ ಈ ಎಲ್ಲ ಸಾಧನೆಯನ್ನು ಪರಿಗಣಿಸಲಾಗುತ್ತದೆ. ಜತೆಗೆ ಕಳಪೆ ಸಾಧನೆ ಮಾಡಿದವರನ್ನೂ ಗುರುತಿಸಲಾಗತ್ತದೆ. ಸದನದಲ್ಲಿ ನಡೆಯುವ ಚರ್ಚೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಕೇಳಬೇಕು. ಯಾವುದೇ ಕಾರಣಕ್ಕೂ ಕಳಪೆ ಪ್ರದರ್ಶನ ನೀಡಬಾರದು ಎಂದು ಮೊದಲ ಬಾರಿ ಸಂಸದರಾಗಿ ಆಯ್ಕೆಯಾದ 160 ಬಿಜೆಪಿ ಸಂಸದರಿಗೆ ಪಕ್ಷ ಪದೇ ಪದೇ ನೀತಿ ಪಾಠ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ