ವೈದ್ಯೆಯ ಕಾಲರ್ ಹಿಡಿದ ಬಿಜೆಪಿ ಸಚಿವ; ವೈರಲ್ ಆದ ಚಿತ್ರ

ಬುಧವಾರ, 1 ಜುಲೈ 2015 (17:18 IST)
ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಸಚಿವ ಚೌಧರಿ ಲಾಲ್ ಸಿಂಗ್ ಉದ್ದೇಶಪೂರ್ವಕವಾಗಿ ಒಬ್ಬ ಮಹಿಳಾ ವೈದ್ಯರ ಕಾಲರ್ ಹಿಡಿದ ಛಾಯಾಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

ಆರೋಗ್ಯ ಮಂತ್ರಿಯಾಗಿರುವ ಬಿಜೆಪಿ ನಾಯಕ, ಅಮರನಾಥ್ ಯಾತ್ರೆ ಆರಂಭದ ಸನ್ನದ್ಧತೆ ಪರೀಕ್ಷಿಸಲು ಲಖನ್ಪುರ್‌ದ ಸರಕಾರಿ ಆಸ್ಪತ್ರೆಗೆ ಹೋದಾಗ ಈ ಘಟನೆ ನಡೆದಿದೆ. 
 
ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬರ ಕಾಲರ್ ಸಮರ್ಪಕ ಸ್ಥಿತಿಯಲ್ಲಿಲ್ಲ ಎಂಬ ಕಾರಣಕ್ಕೆ ಅದನ್ನು ಸಚಿವರು ಸರಿಪಡಿಸುವಾಗ ಯಾರೋ ಫೋಟೋ ಕ್ಲಿಕ್ಕಿಸಿದ್ದಾರೆ.
 
"ಮಹಿಳಾ ವೈದ್ಯೆಯ ಬಳಿ ಹೋದ ಸಚಿವ, "ಮಗಳೇ ನಿನ್ನ ಕಾಲರ್ ಸರಿಯಿಲ್ಲ', ಎಂದು ಹೇಳಿ ಅದನ್ನು ತಮ್ಮ ಕೈಯ್ಯಾರೆ ಸರಿ ಪಡಿಸಿದ್ದಾರೆ. ಅದನ್ನು ವೈದ್ಯೆ ಕೂಡ ವಿರೋಧಿಸಿಲ್ಲ", ಎಂದು ಈ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 
 
"ಸಚಿವರು ವೈದ್ಯೆಯ ಕಾಲರ್ ಸರಿ ಮಾಡುತ್ತಿದ್ದುದನ್ನು ಗಮನಿಸಿದ ಇತರ ಮಹಿಳಾ ವೈದ್ಯರು ಬೇಗ ಬೇಗ ತಮ್ಮ ಕಾಲರ್‌ಗಳನ್ನು ಪರೀಕ್ಷಿಸಿಕೊಂಡು ಸರಿಪಡಿಸಿಕೊಂಡರು", ಎಂದು ಅಧಿಕಾರಿ ಹೇಳಿದ್ದಾರೆ. 
 
"ಆ ಸಂದರ್ಭದಲ್ಲಿ ಬಹಳಷ್ಟು ಜನರು ಅಲ್ಲಿ ನೆರೆದಿದ್ದರು. ಅವರು ಅನುಚಿತ ರೀತಿಯಲ್ಲಿ ಆಕೆಯನ್ನು ಸ್ಪರ್ಶಿಸಿದರು ಎಂದು ನನಗನಿಸುತ್ತಿಲ್ಲ", ಎಂದು ಸಚಿವರನ್ನು ಅವರು ಸಮರ್ಥಿಸಿಕೊಂಡಿದ್ದಾರೆ. 
 
ಫೆಬ್ರವರಿ ತಿಂಗಳಲ್ಲಿ ಸಿಂಗ್ ವಿರುದ್ಧ ವೈದ್ಯೆಯೊಬ್ಬಳು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಎಪ್ರೊನ್ (ವೈದ್ಯರು ಧರಿಸುವ ಬಿಳಿ ಬಣ್ಣದ ಮೇಲಂಗಿ) ಧರಿಸಿಲ್ಲವೇಕೆ ಎಂದು ಸಚಿವರು ಆಕ್ಷೇಪಿಸಿದ್ದಕ್ಕೆ ವೈದ್ಯೆ 'ಮಾನಸಿಕ ಕಿರುಕುಳ ನೀಡಿದ್ದಾರೆ', ಎಂದು ದೂರಿದ್ದರು. 
 

ವೆಬ್ದುನಿಯಾವನ್ನು ಓದಿ