ಜೆಎನ್‌ಯು ಸೆಕ್ಸ್,ಡ್ರಗ್ಸ್ ಹಬ್ ಎಂದ ಶಾಸಕನ ಮೇಲೆ ಅಮಿತಾ ಶಾ ಕೆಂಗಣ್ಣು

ಬುಧವಾರ, 24 ಫೆಬ್ರವರಿ 2016 (16:09 IST)
ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯ ಸೆಕ್ಸ್ ಮತ್ತು ಡ್ರಗ್ಸ್ ಕೇಂದ್ರ ಎಂದು ವಿಲಕ್ಷಣ ಹೇಳಿಕೆಯನ್ನು ನೀಡಿದ್ದ ಬಿಜೆಪಿ ಶಾಸಕ ಜ್ಞಾನದೇವ ಅಹುಜಾ ಮೇಲೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೆಂಗಣ್ಣು ಬೀರಿದ್ದಾರೆ. 
 
ರಾಜಸ್ಥಾನದ ಶಾಸಕ ಅಹುಜಾಗೆ ಶಾ ಸಮನ್ಸ್ ಜಾರಿ ಮಾಡಿದ್ದಾರೆ.
 
ರಾಷ್ಟ್ರವಿರೋಧಿ ಘೋಷಣೆ ವಿವಾದದಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿರುವ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯ ಚರ್ಚೆಯ ಕೇಂದ್ರ ಬಿಂದುವಾಗಿರುವ ಮಧ್ಯೆ ವಿಶ್ವವಿದ್ಯಾಲಯ ಮತ್ತು ಅದರ ವಿದ್ಯಾರ್ಥಿಗಳ ಮಾನನಷ್ಟವಾಗುವಂತಹ ಹೇಳಿಕೆಯನ್ನು ಶಾಸಕ ಸೋಮವಾರ ದಿನ ನೀಡಿದ್ದರು.
 
ಜೆಎನ್‌ಯುವಿನಲ್ಲಿ ಓದುತ್ತಿರುವವರು ಲೈಂಗಿಕತೆ ಮತ್ತು ಡ್ರಗ್ಸ್ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದ ಅವರು ಜೆಎನ್‌ಯುಗಳ ಅಕ್ರಮ ಅಂಕಿಅಂಶಗಳ ಪಟ್ಟಿಯನ್ನು ಸಹ ಅವರು ನೀಡಿದ್ದು, 10,000ಕ್ಕಿಂತ ಹೆಚ್ಚು ಸಿಗರೇಟ್ ತುಂಡುಗಳು ಮತ್ತು 4,000 ಬೀಡಿ ತುಂಡುಗಳು, 50,000 ದೊಡ್ಡ ಮತ್ತು ಸಣ್ಣ ತುಂಡು ಎಲುಬುಗಳು, 2,000 ಚಿಪ್ಸ್ ಕವರ್, 3,000 ಬಳಸಿದ ಕಾಂಡೋಮ್‌ಗಳು ವಿಶ್ವವಿದ್ಯಾಲಯ ಆವರಣದಲ್ಲಿ ಸಿಕ್ಕಿವೆ. ನಮ್ಮ ಸಹೋದರಿಯರ ಮತ್ತು ಹೆಣ್ಣು ಮಕ್ಕಳ ಜತೆಯಲ್ಲಿ ಅವರು ಕುಕೃತ್ಯವನ್ನೆಸಗಿದ್ದಾರೆ. 500 ಗರ್ಭನಿರೋಧಕ ಚುಚ್ಚುಮದ್ದುಗಳು ಸಹ ವಿಶ್ವವಿದ್ಯಾಲಯ ಆವರಣದಲ್ಲಿ ಪತ್ತೆಯಾಗಿವೆ ಎಂದು ಹೇಳಿದ್ದರು.
 
ರಾತ್ರಿ 8 ಗಂಟೆಯ ಬಳಿಕ ವಿದ್ಯಾರ್ಥಿಗಳು ಕ್ಯಾಂಪಸ್ ಒಳಗಡೆ ಡ್ರಗ್ಸ್ ಸೇವಿಸುತ್ತಾರೆ. ಜೆಎನ್‌ಯುನಲ್ಲಿ ಓದುತ್ತಿರುವವರು ಮಕ್ಕಳಲ್ಲ, ಇಬ್ಬರು ಮಕ್ಕಳ ಪೋಷಕರು. ಬೆಳಕಿನಲ್ಲಿ ಶಾಂತಿ ಪ್ರತಿಭಟನೆ ನಡೆಸುವ ಅವರು ರಾತ್ರಿ ಅಸಭ್ಯ ನೃತ್ಯವನ್ನು ಪ್ರದರ್ಶಿಸುತ್ತಾರೆ ಎಂದು ಶಾಸಕ ಆರೋಪಿಸಿದ್ದರು.

ವೆಬ್ದುನಿಯಾವನ್ನು ಓದಿ