ಜೆಎನ್‌ಯು ಸೆಕ್ಸ್ ಮತ್ತು ಡ್ರಗ್ಸ್ ಕೇಂದ್ರ ಎಂದ ಬಿಜೆಪಿ ಶಾಸಕ

ಮಂಗಳವಾರ, 23 ಫೆಬ್ರವರಿ 2016 (14:48 IST)
ರಾಷ್ಟ್ರವಿರೋಧಿ ಘೋಷಣೆ ವಿವಾದದಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿರುವ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯ ಚರ್ಚೆಯ ಕೇಂದ್ರ ಬಿಂದುವಾಗಿರುವ ಮಧ್ಯೆ ವಿಶ್ವವಿದ್ಯಾಲಯ ಮತ್ತು ಅದರ ವಿದ್ಯಾರ್ಥಿಗಳ ಮಾನನಷ್ಟವಾಗುವಂತಹ ಹೇಳಿಕೆಯನ್ನು ನೀಡಿರುವ ಬಿಜೆಪಿ ಶಾಸಕ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. 

ಜೆಎನ್‌ಯುವಿನಲ್ಲಿ ಓದುತ್ತಿರುವವರು ಲೈಂಗಿಕತೆ ಮತ್ತು ಡ್ರಗ್ಸ್ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಎಂದು ರಾಜಸ್ಥಾನದ ಅಲ್ವಾರ ಜಿಲ್ಲೆಯ ರಾಮಗಢ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಜ್ಞಾನದೇವ್ ಅಹುಜಾ ಹೇಳಿದ್ದಾರೆ. 
 
ಜೆಎನ್‌ಯುಗಳ ಅಕ್ರಮ ಅಂಕಿಅಂಶಗಳ ಪಟ್ಟಿಯನ್ನು ಸಹ ಅವರು ನೀಡಿದ್ದು, 10,000ಕ್ಕಿಂತ ಹೆಚ್ಚು ಸಿಗರೇಟ್ ತುಂಡುಗಳು ಮತ್ತು 4,000 ಬೀಡಿ ತುಂಡುಗಳು, 50,000 ದೊಡ್ಡ ಮತ್ತು ಸಣ್ಣ ತುಂಡು ಎಲುಬುಗಳು, 2,000 ಚಿಪ್ಸ್ ಕವರ್, 3,000 ಬಳಸಿದ ಕಾಂಡೋಮ್‌ಗಳು ವಿಶ್ವವಿದ್ಯಾಲಯ ಆವರಣದಲ್ಲಿ ಸಿಕ್ಕಿವೆ. ನಮ್ಮ ಸಹೋದರಿಯರ ಮತ್ತು ಹೆಣ್ಣು ಮಕ್ಕಳ ಜತೆಯಲ್ಲಿ ಅವರು ಕುಕೃತ್ಯವನ್ನೆಸಗಿದ್ದಾರೆ. 500 ಗರ್ಭನಿರೋಧಕ ಚುಚ್ಚುಮದ್ದುಗಳು ಸಹ ವಿಶ್ವವಿದ್ಯಾಲಯ ಆವರಣದಲ್ಲಿ ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ. 
 
ರಾತ್ರಿ 8 ಗಂಟೆಯ ಬಳಿಕ ವಿದ್ಯಾರ್ಥಿಗಳು ಕ್ಯಾಂಪಸ್ ಒಳಗಡೆ ಡ್ರಗ್ಸ್ ಸೇವಿಸುತ್ತಾರೆ. ಜೆಎನ್‌ಯುನಲ್ಲಿ ಓದುತ್ತಿರುವವರು ಮಕ್ಕಳಲ್ಲ, ಇಬ್ಬರು ಮಕ್ಕಳ ಪೋಷಕರು. ಬೆಳಕಿನಲ್ಲಿ ಶಾಂತಿ ಪ್ರತಿಭಟನೆ ನಡೆಸುವ ಅವರು ರಾತ್ರಿ ಅಸಭ್ಯ ನೃತ್ಯವನ್ನು ಪ್ರದರ್ಶಿಸುತ್ತಾರೆ ಎಂದು ಶಾಸಕ ಆರೋಪಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ