ಕರ್ನಾಟಕ ಸರಕಾರದಿಂದ ರೇಪ್ ಪ್ರಕರಣಗಳ ವರದಿ ಕೇಳಿದ ಬಿಜೆಪಿ ಸಂಸದರು

ಬುಧವಾರ, 23 ಜುಲೈ 2014 (18:20 IST)
ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ತೀವ್ರ ಆತಂಕ ಸೃಷ್ಟಿಸಿರುವ ಅತ್ಯಾಚಾರ ಪ್ರಕರಣಗಳ ಕುರಿತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರದ ಬಳಿ ವರದಿ ಕೇಳುವಂತೆ  ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. 

ಲೋಕಸಭೆಯ ಶೂನ್ಯವೇಳೆಯಲ್ಲಿ  ಮಾತನ್ನಾಡುತ್ತಿದ್ದ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ  ಕಳೆದ 15 ದಿನಗಳಲ್ಲಿ 50 ಅತ್ಯಾಚಾರದ ಪ್ರಕರಣಗಳು ವರದಿಯಾಗಿದ್ದು, ಆರೋಪಿಗಳ ವಿರುದ್ಧ ರಾಜ್ಯ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ.  ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು. 
 
ಬೆಂಗಳೂರಿನ ಮಾರತಹಳ್ಳಿಯಲ್ಲಿ ನಡೆದ 6 ವರ್ಷದ ಶಾಲಾ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿದ ಅವರು, ಕಾಂಗ್ರೆಸ್ ಸದಸ್ಯರ ವಿರೋಧ ಮಧ್ಯೆ, " ರಾಜ್ಯದಲ್ಲಿ  ಸರಕಾರ ಅಸ್ತಿತ್ವದಲ್ಲಿಲ್ಲ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ " ಎಂದು ಗುಡುಗಿದರು.  
 
ಇದೇ ವಿಷಯವನ್ನು ಪ್ರಸ್ತಾಪಿಸಿದ ಇನ್ನೊಬ್ಬ ಬಿಜೆಪಿ ಸಂಸದ ಪಿ ಸಿ ಮೋಹನ್  ರಾಜ್ಯದಲ್ಲಿನ ಮಹಿಳೆಯರು ಕ್ರೂರ ದಾಳಿಗೆ ಒಳಗಾಗುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಲು ಪೋಲಿಸರು ದೀರ್ಘಾವಧಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದರು.
 
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಮೋಹನ್ ಹೆಣ್ಣುಮಗುವಿನ ಭದ್ರತೆಯನ್ನು ಕಾಪಾಡುವಲ್ಲಿ ವಿಫಲವಾದ ಶಾಲಾ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 
 
ಈ ವಿಷಯದಲ್ಲಿ ಕೇಂದ್ರ ಮಧ್ಯ ಪ್ರವೇಶಿಸಬೇಕು ಮತ್ತು ಸರಕಾರದಿಂದ ವರದಿಯನ್ನು ಕೇಳಬೇಕು ಎಂದು ಅವರು ಆಗ್ರಹಿಸಿದರು. 
 
ಸಮಾಜವಾದಿ ಪಕ್ಷದ ಆಡಳಿತವಿರುವ ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಗಳ ಬಗ್ಗೆ ಕೂಡ ಯುಪಿಯ ಬಿಜೆಪಿ ಸಂಸದ ಕೌಶಲ್ ಕಿಶೋರ್ ಧ್ವನಿ ಎತ್ತಿದರು. 

ವೆಬ್ದುನಿಯಾವನ್ನು ಓದಿ