ಬಿಜೆಪಿಯಿಂದ ತಮಗೆ ಸಿಎಂ ಪಟ್ಟದ ಆಫರ್: ಕುಮಾರ್ ವಿಶ್ವಾಸ್ ಆರೋಪ

ಶನಿವಾರ, 30 ಆಗಸ್ಟ್ 2014 (10:52 IST)
ನವದೆಹಲಿ: ದೆಹಲಿಯಲ್ಲಿ ಆಪ್ ನಾಯಕರಿಗೆ ಬಿಜೆಪಿ ಗಾಳ ಹಾಕುತ್ತಿದೆ ಎಂದು ಆಪ್ ಮುಖಂಡ ಕುಮಾರ್ ವಿಶ್ವಾಸ್ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಸಂಸದರೊಬ್ಬರು ನಮ್ಮ ಮನಗೆ ಭೇಟಿ ನೀಡಿ ದೆಹಲಿಯಲ್ಲಿ ಸರ್ಕಾರ ರಚಿಸುವ ಬಗ್ಗೆ ಮಾತನಾಡಿದ್ರು. ಆಪ್‌ಗೆ ಗುಡ್‌ಬೈ ಹೇಳಿ ಬಿಜೆಪಿಗೆ ಬೆಂಬಲಿಸಿದರೆ ಸಿಎಂ ಪಟ್ಟ ನೀಡುವುದಾಗಿ ಆಫರ್ ನೀಡಿದ್ದಾರೆ ಎಂದು ಆಪ್ ಮುಖಂಡ ಕುಮಾರ್ ವಿಶ್ವಾಸ್ ಆರೋಪಿಸಿದರು.

ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ನಡೆಸಿದ್ದು, ಸರ್ಕಾರ ರಚನೆಗೆ ಬಹುಮತದ ಸದಸ್ಯಬಲ ಸಾಧಿಸಲು ಕೆಲವೇ ಸದಸ್ಯರ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಆಪ್ ನಾಯಕರಿಗೆ ಬಿಜೆಪಿ ಬಲೆ ಬೀಸುತ್ತಿದೆ ಎಂದು ಕುಮಾರ್ ವಿಶ್ವಾಸ್ ಆರೋಪಿಸಿದ್ದಾರೆ.
 
ಲೆಫ್ಟಿನೆಂಟ್ ಗವರ್ನರ್ ಸರ್ಕಾರ ರಚನೆಗೆ ಆಹ್ವಾನ ನೀಡಿದರೆ ಎಲ್ಲಾ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ಬಿಜೆಪಿಯ ನಗರ ಘಟಕ ಸ್ಪಷ್ಟಪಡಿಸಿರುವುದು ಕುಮಾರ್ ವಿಶ್ವಾಸ್ ಆರೋಪಕ್ಕೆ ಪುಷ್ಠಿ ಸಿಕ್ಕಿದೆ. 
 
ಎಲ್.ಜಿ. ನಜೀಬ್ ಜಂಗ್ ಶೀಘ್ರದಲ್ಲೇ ದೆಹಲಿಯ ರಾಜಕೀಯ ಪರಿಸ್ಥಿತಿ ಬಗ್ಗೆ ಕೇಂದ್ರ ಗೃಹಸಚಿವಾಲಯಕ್ಕೆ ವರದಿ ಸಲ್ಲಿಸಲಿದ್ದು, ತರುವಾಯ ಸರ್ಕಾರ ರಚನೆಗೆ ಬಿಜೆಪಿಗೆ ಕರೆ ನೀಡಬಹುದು.ಲೆಫ್ಟಿನೆಂಟ್ ಗವರ್ನರ್ ಸರ್ಕಾರ ರಚನೆಗೆ ಕರೆ ನೀಡಿದರೆ, ನಾವು ಎಲ್ಲಾ ಸಾಧ್ಯತೆಯನ್ನು ಪರಿಶೀಲಿಸುತ್ತೇವೆ.

ಏಕೆಂದರೆ ಯಾವುದೇ ಪಕ್ಷದ ಶಾಸಕರಿಗೆ ಚುನಾವಣೆ ಬೇಕಿಲ್ಲ ಎಂದು ನಗರದ ಬಿಜೆಪಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಹೇಳಿದ್ದಾರೆ. ಬಹುಮತ ಸಾಬೀತುಪಡಿಸುವಂತೆ ಕೇಳಿದರೆ ಎಲ್ಲಾ ಸಾಧ್ಯತೆಗಳನ್ನು ಹುಡುಕುವುದು ನನ್ನ ಕೆಲಸವಾಗಿದೆ ಎಂದು ಉಪಾಧ್ಯಾಯ ಹೇಳಿರುವುದರಿಂದ ಕುಮಾರ್ ವಿಶ್ವಾಸ್ ಆರೋಪ ನಿಜವಿದ್ದರೂ ಇರಬಹುದು ಎನಿಸುತ್ತಿದೆ. 
 

ವೆಬ್ದುನಿಯಾವನ್ನು ಓದಿ