ದೇಶದಿಂದ ಕಾಂಗ್ರೆಸ್ ಪಕ್ಷವನ್ನು ನಿರ್ಮೂಲನೆಗೊಳಿಸುತ್ತೇವೆ: ಅಮಿತ್ ಶಾ

ಸೋಮವಾರ, 20 ಅಕ್ಟೋಬರ್ 2014 (14:09 IST)
ಶೀಘ್ರದಲ್ಲಿಯೇ ಭಾರತ ಕಾಂಗ್ರೆಸ್ ಮುಕ್ತ ರಾಷ್ಟ್ರವಾಗಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದ್ದಾರೆ.
 
ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಯಶಸ್ಸಿನ ಹಿನ್ನಲೆಯಲ್ಲಿ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, 'ಭಾರತ ಶೀಘ್ರದಲ್ಲಿಯೇ ಕಾಂಗ್ರೆಸ್ ಮುಕ್ತ ರಾಷ್ಟ್ರವಾಗಲಿದೆ ಎಂದು ಹೇಳಿದರು. ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಭೂತ ಪೂರ್ವ ಸಾಧನೆ ಮಾಡಿದ್ದು, 2 ರಾಜ್ಯಗಳಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಆಡಳಿತಾ ರೂಢ ಕಾಂಗ್ರೆಸ್ ಪಕ್ಷ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಕನಿಷ್ಟ ಕಾಂಗ್ರೆಸ್‌ಗೆ ವಿಪಕ್ಷ ಸ್ಥಾನವೂ ದೊರೆತಿಲ್ಲ' ಎಂದು ಹೇಳಿದರು.
 
'ಕಾಂಗ್ರೆಸ್ ಪಕ್ಷ ಮಾಡಲಾಗದ್ದನ್ನು ಬಿಜೆಪಿ ಅಧಿಕಾರಕ್ಕೆ ಬಂದ ಕೇವಲ ನಾಲ್ಕು ತಿಂಗಳಲ್ಲೇ ಮಾಡಿ ತೋರಿಸಿದೆ. ಇದೇ ನಮ್ಮ ಗೆಲುವಿಗೆ ಮುಖ್ಯ ಕಾರಣವಾಯಿತು'.
 
'ವಿರೋಧ ಪಕ್ಷಗಳು ಮೊದಲಿನಿಂದಲೂ ಮೋದಿ ಅಲೆ ಇಲ್ಲ ಎಂದು ಹೇಳುತ್ತಿದ್ದವು. ಆದರೆ ಮಹಾರಾಷ್ಟ್ರ ಮತ್ತು ಹರ್ಯಾಣ ಚುನಾವಣಾ ಫಲಿತಾಂಶ ಅವರ ಟೀಕೆಗಳಿಗೆ ಉತ್ತರ ನೀಡಿದ್ದು, ಎರಡೂ ರಾಜ್ಯಗಳಲ್ಲಿ ಬಿಜೆಪಿ, ಸರ್ಕಾರ ರಚನೆ ಮಾಡಲಿದೆ. ಈಗಲೂ ಸುನಾಮಿಯಂತೆ ಮೋದಿ ಅವರ ಅಲೆ ಇದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಶೇ.28ರಷ್ಟು ಮತ್ತು ಹರ್ಯಾಣದಲ್ಲಿ ಶೇ. 33ರಷ್ಟು ಮತಗಳು ದೊರೆತಿವೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧಿಸಿತ್ತು. ನರೇಂದ್ರ ಮೋದಿ ಅವರ ಸರ್ಕಾರದ ಮೇಲೆ ನಂಬಿಕೆ ಇಟ್ಟು, ಎರಡೂ ರಾಜ್ಯಗಳ ಮತದಾರರು ಮತಹಾಕಿದ್ದಾರೆ. ಹೀಗಾಗಿ ಮೊದಲು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ'.
 
'ಚುನಾವಣಾ ಪೂರ್ವದಲ್ಲಿ ನಾವು ಕೊಟ್ಟ ಭರವಸೆಗಳನ್ನು ಇನ್ನು ನಾಲ್ಕು ತಿಂಗಳಲ್ಲಿ ಈಡೇರಿಸುತ್ತೇವೆ. ಉತ್ತಮ ಆಡಳಿತ ನೀಡುವುದು ನಮ್ಮ ಗುರಿಯಾಗಿದ್ದು, ಅದು ನಮ್ಮ ಜವಾಬ್ದಾರಿ ಕೂಡ' ಎಂದು ಅಮಿತ್ ಶಾ ಹೇಳಿದರು.
 
ಇದೇ ವೇಳೆ ಮೈತ್ರಿ ಕುರಿತು ಮಾತನಾಡಿದ ಅಮಿತ್ ಶಾ ಅವರು, 'ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದ್ದು, ಬಿಜೆಪಿ ಅಭ್ಯರ್ಥಿಯೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ನಾವು ಶಿವಸೇನೆಯೊಂದಿಗೆ ಮೈತ್ರಿ ಮುರಿದುಕೊಂಡಿಲ್ಲ. ಮೈತ್ರಿ ಮುರಿಯುವ ನಿರ್ಧಾರ ಕೂಡ ನಮ್ಮದಾಗಿರಲಿಲ್ಲ. ಚುನಾವಣಾ ಪೂರ್ವದಲ್ಲಿ ನಾವು ಎಷ್ಟು ಸ್ಥಾನ ಕೇಳಿದ್ದೆವೋ ಅದಕ್ಕಿಂತಲೂ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸಿದ್ದೇವೆ. ಇದೇ ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತದೆ'.
 
'ಸರ್ಕಾರ ರಚನೆ ಕುರಿತಂತೆ ಎನ್‌ಸಿಪಿ ಪಕ್ಷವೇ ಬಾಹ್ಯ ಬೆಂಬಲ ನೀಡುವ ಕುರಿತು ಹೇಳಿಕೆ ನೀಡಿತ್ತು. ಈ ಸಂಬಂಧ ಮಾತುಕತೆಯಾಗಿತ್ತೇ ಹೊರತು, ಶಿವಸೇನೆಯ ಮೈತ್ರಿ ಕಡಿಯುವ ಕುರಿತು ಮಾತುಕತೆ ನಡೆಸಿರಲಿಲ್ಲ. ಮಹಾರಾಷ್ಟ್ರ ಮತ್ತು ಹರ್ಯಾಣ ಎರಡೂ ರಾಜ್ಯಗಳಲ್ಲಿ ಯಾವುದೇ ಬಿಕ್ಕಟ್ಟಿಲ್ಲದೇ ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಸರ್ಕಾರ ರಚನೆ ಮತ್ತು ಮುಖ್ಯಮಂತ್ರಿ ಆಯ್ಕೆ ಕುರಿತ ಮುಂದಿನ ನಿರ್ಧಾರಗಳನ್ನು ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ' ಶಾ ತಿಳಿಸಿದರು.
 

ವೆಬ್ದುನಿಯಾವನ್ನು ಓದಿ