ಬಿಜೆಪಿ, ಆರ್‌ಎಸ್ಎಸ್ ಜೆಎನ್‌ಯು ಉನ್ನತ ಪರಂಪರೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ: ಸ್ವಾಮಿ ಅಗ್ನಿವೇಶ್

ಮಂಗಳವಾರ, 16 ಫೆಬ್ರವರಿ 2016 (15:39 IST)
ವಿಶ್ವವಿದ್ಯಾಲಯದ ಚುನಾವಣೆಯಲ್ಲಿ ತಮ್ಮ ವಿದ್ಯಾರ್ಥಿ ಘಟಕ ಸೋತಿರುವುದಕ್ಕೆ ಸೇಡು ತೀರಿಸಿಕೊಳ್ಳಲು ಬಿಜೆಪಿ, ಆರ್‌ಎಸ್ಎಸ್ ಮತ್ತು ಎಬಿವಿಪಿ ಜೆಎನ್‌ಯುವಿನ ಉನ್ನತ ಪರಂಪರೆಯನ್ನು ಹಾಳುಗೆಡಹುವ ಪ್ರಯತ್ನವನ್ನು ನಡೆಸುತ್ತಿವೆ ಎಂದು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಆರೋಪಿಸಿದ್ದಾರೆ. 

ಅಖಿಲ ಭಾರತಯ ವಿದ್ಯಾರ್ಥಿ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಭಾರತೀಯ ಜನತಾ ಪಕ್ಷದ ಜವಾಬ್ದಾರಿಯುತ ನಾಯಕರು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಉನ್ನತ ಪರಂಪರೆಯನ್ನು ಕೆಡಿಸಲು ಪ್ರಯತ್ನಿಸುತ್ತಿರುವುದು ಖಂಡನೀಯವಾಗಿದೆ. ಕನ್ಹಯ್ಯಾ ಕುಮಾರ್ (ಜೆಎನ್‌ಯುಎಸ್‌ಯು ಅಧ್ಯಕ್ಷ) ನ ಎದುರು ಸೋತ ಎಬಿವಿಪಿ ಈ ತಂತ್ರವನ್ನು ಪ್ರಯೋಗಿಸಿದೆ. ಇದು ಸಂಪೂರ್ಣವಾಗಿ ತಪ್ಪು. ಇಂತಹ ಕೊಳಕು ಕೃತ್ಯಗಳಿಗೆ ರಾಜಕೀಯದಲ್ಲಿ ಅವಕಾಶವಿರಬಾರದು ಎಂದು ಅವರು ಕಿಡಿಕಾರಿದ್ದಾರೆ. 
 
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಘಟನೆ ಜೆಎನ್‌ಯುನಲ್ಲಿ ಪುನರಾವರ್ತಿಸಲಾಯಿತು. ಮಹತ್ವದ ಸ್ಥಾನಗಳಿಗೆ ಆರ್‌ಎಸ್ಎಸ್ ಬಿಜೆಪಿಗೆ ಸಂಬಂಧಪಟ್ಟವರನ್ನು ನೇಮಿಸಲು ಸರ್ಕಾರ ಅನಗತ್ಯ ಅತ್ಯವಸರ ತೋರಿಸುತ್ತಿದೆ ಎಂದು ಹೇಳಲು ನನಗೆ ನೋವಾಗುತ್ತಿದೆ. ಇದು ದೇಶದ ಬೌದ್ಧಿಕ ಪರಂಪರೆಯ ಮೇಲೆ ನಡೆದ ದೊಡ್ಡ ದಾಳಿ. ಈ ಬಗ್ಗೆ ನಾವು ಎಚ್ಚರಿಕೆಯನ್ನು ಹೊಂದಿರಬೇಕು ಎಂದು ಅಗ್ನಿವೇಶ್ ಹೇಳಿದ್ದಾರೆ. 
 
ಜೆಎನ್‌ಯು ಆವರಣದಲ್ಲಿ ದೇಶದ್ರೋಹಿ ಘೋಷಣೆಗಳನ್ನು ಕೂಗಿದ್ದನ್ನು ಅವರು ಖಂಡಿಸಿದ್ದಾರೆ, ಆದರೆ ಪ್ರಕರಣದ ತನಿಖೆಗಾಗಿ ಉಪಕುಲಪತಿಯವರು ನೇಮಿಸಿರುವ ಸಮಿತಿಯ ವರದಿ ಬರುವುದಕ್ಕಿಂತ ಮೊದಲೇ ಕನ್ಹಯ್ಯಾನನ್ನು ಬಂಧಿಸಿದ್ದು ತಪ್ಪು. ತನಿಖೆಯ ಬಳಿಕವಷ್ಟೇ ಸರಿಯಾದ ಕ್ರಮವನ್ನು ತೆಗೆದುಕೊಳ್ಳಬೇಕಿತ್ತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 

ವೆಬ್ದುನಿಯಾವನ್ನು ಓದಿ