ಬಿಜೆಪಿ- ಆರ್‌ಎಸ್ಎಸ್ ಸಮನ್ವಯ ಸಭೆ: ಇಂದು ಮೋದಿ ಉಪಸ್ಥಿತಿ ಸಾಧ್ಯತೆ

ಗುರುವಾರ, 3 ಸೆಪ್ಟಂಬರ್ 2015 (13:39 IST)
ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಆರ್‌ಎಸ್ಎಸ್  ಬಿಜೆಪಿ ಸಮನ್ವಯ ಸಭೆ ಇಂದು ಎರಡನೇ ದಿನಕ್ಕೆ ಕಾಲಿರಿಸಿದ್ದು ಇಂದಿನ ಸಮಾವೇಶದಲ್ಲಿ ಪ್ರಧಾನಿ ಮೋದಿ ಸಹ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.  

ಇಂದಿನ ಸಭೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಮೇಲೆ ಚರ್ಚೆಯಾಗಲಿದ್ದು. ಒಂದು ವರ್ಷ 3 ತಿಂಗಳ ಪ್ರಾಯದ  ಕೇಂದ್ರ ಸರಕಾರದ ಸಾಧನೆ ಹಾಗೂ ವೈಫಲ್ಯಗಳ ಕುರಿತಂತೆ ಮಹತ್ವದ ಚರ್ಚೆಯಾಗಲಿದೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ. 
 
'ಏಕ ಶ್ರೇಣಿ ಏಕ ಪಿಂಚಣಿ', ಗುಜರಾತ್‌ನಲ್ಲಿ ಎದುರಾಗಿರುವ ಪಟೇಲ್ ಮೀಸಲಾತಿ ಹೋರಾಟ, ಧರ್ಮಾಧಾರಿತ ಜಾತಿಗಣತಿ ಸೇರಿದಂತೆ ಹಲವು ವಿಷಯಗಳು ಇಂದು ಚರ್ಚೆಯಾಗಲಿವೆ ಎಂದು ಸಂಘದ ವಕ್ತಾರರು ತಿಳಿಸಿದ್ದಾರೆ.
 
ಸಮನ್ವಯ ಸಭೆಯ ಮೊದಲ ದಿನವಾದ ಬುಧವಾರ  ರಾಮಮಂದಿರ, ಭೂಸ್ವಾಧೀನ ವಿಧೇಯಕ ವಿಚಾರದ ಬಗ್ಗೆ ಪ್ರಸ್ತಾಪವಾಯಿತಾದರೂ  'ಏಕ ಶ್ರೇಣಿ ಏಕ ಪಿಂಚಣಿ' ಕುರಿತಂತೆ ಹೆಚ್ಚಿನ ಮಾತುಕತೆಯಾಯಿತು ಎಂದು ತಿಳಿದು ಬಂದಿದೆ.
 
ನಿವೃತ್ತ ಸೈನಿಕರು ಕೈಗೊಂಡಿರುವ ಆಮರಣಾಂತ ಧರಣಿ ಬಗ್ಗೆ ಸಂಘ ಹೆಚ್ಚಿನ ಗಂಭೀರತೆಯನ್ನು ಪ್ರದರ್ಶಿಸಿದ್ದು ಬಿಹಾರ್ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ಈ ಬಿಕ್ಕಟ್ಟನ್ನು ತ್ವರಿತವಾಗಿ ಬಗೆಹರಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.
 
ನಾಳೆ ಸಭೆಯ ಕೊನೆಯ ದಿನವಾಗಿದೆ. ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನುವುದು ಗಮನಾರ್ಹ ಅಂಶ . 

ವೆಬ್ದುನಿಯಾವನ್ನು ಓದಿ