ಸೆಪ್ಟೆಂಬರ್ 2 ರಂದು ಬಿಜೆಪಿ, ಆರೆಸ್ಸೆಸ್ ನಾಯಕರ ಸಂಘಟನಾ ಸಭೆ

ಮಂಗಳವಾರ, 1 ಸೆಪ್ಟಂಬರ್ 2015 (15:09 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಒಂದು ವರ್ಷದ ಅವಧಿ ಮತ್ತು ಎದುರಾಗಿರುವ ಸಮಸ್ಯೆಗಳ ಕುರಿತಂತೆ ಆರೆಸ್ಸೆಸ್ ಮತ್ತು ಬಿಜೆಪಿ ಸಂಘಟನಾತ್ಮಕ ಸಭೆ ಸೆಪ್ಟೆಂಬರ್ 2 ರಿಂದ ಮೂರು ದಿನಗಳ ಕಾಲ ನಡೆಯಲಿದೆ.  
 
ಪ್ರಧಾನಿ ಮೋದಿ ಮತ್ತು ಸಂಪುಟದ ಕೆಲ ಸಚಿವರು ಹಾಗೂ ಬಿಜೆಪಿ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಆರೆಸ್ಸೆಸ್ ನಾಯಕರೊಂದಿಗೆ  ಒನ್ ರ್ಯಾಂಕ್ ಒನ್ ಪೆನ್ಶನ್ ಯೋಜನೆ, ಇತ್ತೀಚೆಗೆ ಬಿಡುಗಡೆಗೊಳಿಸಲಾದ ಧರ್ಮ ಆಧಾರಿತ ಜಾತಿ ಜನಗಣತಿ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
 
ಮೂರು ದಿನಗಳ ಸಭೆಯಲ್ಲಿ ಮಹತ್ವವಾಗಿ ಗುಜರಾತ್‌ ಪಟೇಲ್ ಸಮುದಾಯದ ಜಾತಿ ಆಧಾರಿತ ಮೀಸಲಾತಿ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಆರೆಸ್ಸೆಸ್ ನಾಯಕರು ತಿಳಿಸಿದ್ದಾರೆ.
 
ಸೆಪ್ಟೆಂಬರ್ 2 ರಿಂದ 4ರವರೆಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಿರಿಯ ನಾಯಕರುಗಳು ಮತ್ತು ಬಿಜೆಪಿ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆರೆಸ್ಸೆಸ್ ವಕ್ತಾರರು ತಿಳಿಸಿದ್ದಾರೆ. 
 
ಆರೆಸ್ಸೆಸ್ ಸ್ವಯಂಸೇವಕರಾದ ಪ್ರಧಾನಿ ಮೋದಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಖಚಿತ ಮಾಹಿತಿಯಿಲ್ಲ. ಆಸಕ್ತಿಕರ ವಿಷಯವೆಂದರೆ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ ಮತ್ತು ಎಂ.ಎಂ.ಜೋಷಿ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.    

ವೆಬ್ದುನಿಯಾವನ್ನು ಓದಿ