ಆಪ್ ಶಾಸಕಿಯನ್ನು ವೇಶ್ಯೆ ಎಂದು ಜರಿದ ಬಿಜೆಪಿ ಶಾಸಕನ ಸದಸ್ಯತ್ವ ರದ್ದು ಸಾಧ್ಯತೆ

ಶುಕ್ರವಾರ, 19 ಫೆಬ್ರವರಿ 2016 (14:59 IST)
ಆಮ್ ಆದ್ಮಿ ಪಕ್ಷದ ಶಾಸಕಿ ಅಲ್ಕಾ ಲಾಂಬಾ ವಿರುದ್ಧ ಅವಹೇಳನಾಕಾರಿ ಭಾಷೆ ಬಳಸಿದ್ದ ಬಿಜೆಪಿ ಶಾಸಕ ಓ.ಪಿ.ಶರ್ಮಾ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸುವಂತೆ ದೆಹಲಿ ವಿಧಾನಸಭೆಯ ನೀತಿ ಶಾಸ್ತ್ರ ಸಮಿತಿ, ಸಭಾಪತಿಯವರಿಗೆ ಶಿಫಾರಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. 
 
ದೆಹಲಿ ವಿಧಾನಸಭೆಯ 10 ಸದಸ್ಯರ ನೀತಿ ಶಾಸ್ತ್ರ ಸಮಿತಿ, ಬಿಜೆಪಿ ಶಾಸಕ ಶರ್ಮಾ ನಿರಂತರವಾಗಿ ಅಮಾನವೀಯ ವರ್ತನೆ, ಅಸಭ್ಯ ಭಾಷೆಗಳನ್ನು ಬಳಸುತ್ತಿರುವ ಆರೋಪಿಯಾಗಿದ್ದು ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸುವಂತೆ ಸಭಾಪತಿಯವರಿಗೆ ಶಿಫಾರಸ್ಸು ಮಾಡಲಾಗಿದೆ.
 
ನೀತಿಶಾಸ್ತ್ರ ಸಮಿತಿ ಹಲವಾರು ಬಾರಿ ಘಟನೆಯ ಬಗ್ಗೆ ವಿವರಿಸಿ ಶಾಸಕಿ ಲಾಂಬಾ ಅವರ ಕ್ಷಮೆಯಾಚಿಸುವ ಅವಕಾಶ ನೀಡಿದ್ದರೂ ಶರ್ಮಾ ಕ್ಷಮೆ ಕೇಳದಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.
 
ಕಳೆದ ನವೆಂಬರ್‌ನಲ್ಲಿ ಬಿಜೆಪಿ ಶಾಸಕ ಓ.ಪಿ.ಶರ್ಮಾ, ಆಮ್ ಆದ್ಮಿ ಪಕ್ಷದ ಶಾಸಕಿ ಅಲ್ಕಾ ಲಾಂಬಾ ಅವರನ್ನು ರಾತ್ರಿ ಹೊತ್ತು ತಿರುಗುವ ಹೆಣ್ಣು ಮತ್ತು ವೇಶ್ಯೆ ಎಂದು ಜರಿದಾಗ ಆಪ್ ಮತ್ತು ಬಿಜೆಪಿ ಶಾಸಕರ ಮಧ್ಯೆ ದೆಹಲಿ ವಿಧಾನಸಭೆಯಲ್ಲಿ ಘರ್ಷಣೆಗೆ ಕಾರಣವಾಗಿತ್ತು.
 
ಆದರೆ, ಶರ್ಮಾ ತಮ್ಮ ಮೇಲಿರುವ ಆರೋಪಗಳನ್ನು ತಳ್ಳಿಹಾಕಿ, ನಾನು ಲಾಂಬಾ ಅವರನ್ನು ಅವಮಾನಿಸಿಲ್ಲ.ಅಗತ್ಯವಾದಲ್ಲಿ ನನ್ನ ವಿರುದ್ಧ ಎಫ್ಐಆರ್ ದಾಖಲಿಸಬಹುದು. ಆವರೆ ನನ್ನ ಮೇಲೆ ಹಲ್ಲೆ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ. ಸಿಸಿಟಿವಿಯಲ್ಲಿ ಸತ್ಯ ಬಹಿರಂಗವಾಗಲಿದೆ ಎಂದು ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ