ಅಂತ್ಯ ಕಂಡ ಬಿಕ್ಕಟ್ಟು : ಬಿಜೆಪಿಗೆ 130 ಸೀಟು ಬಿಟ್ಟುಕೊಡಲು ಒಪ್ಪಿದ ಸೇನೆ

ಮಂಗಳವಾರ, 23 ಸೆಪ್ಟಂಬರ್ 2014 (16:56 IST)
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ಕುರಿತಂತೆ ಬಿಜೆಪಿ-ಶಿವಸೇನೆ ನಡುವೆ ಕಳೆದೊಂದು ವಾರದಿಂದ ನಡೆಯುತ್ತಿದ್ದ  ವಿವಾದ ಕೊನೆಗೂ ಸುಖಾಂತ್ಯಗೊಂಡಿದೆ. ಬಿಜೆಪಿಗೆ 130 ಸೀಟುಗಳನ್ನು ಬಿಟ್ಟುಕೊಡಲು ಶಿವಸೇನೆ ಒಪ್ಪಿಕೊಂಡಿದ್ದು ಮುರಿಯುವ ಹಂತಕ್ಕೆ ಜಾರಿದ್ದ 25 ವರ್ಷಗಳ ಮೈತ್ರಿ ಉಳಿದುಕೊಂಡಿದೆ. 

ಮೂಲಗಳ ಪ್ರಕಾರ 288 ವಿಧಾನ ಸಭಾ ಕ್ಷೇತ್ರಗಳಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 151 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿಗೆ  130 ಕ್ಷೇತ್ರಗಳನ್ನು ನೀಡಲಿದೆ.
 
ಕೇಂದ್ರ ಮುಂಬೈನ ದಾದರ್‌ನಲ್ಲಿರುವ ಬಿಜೆಪಿ ಕಚೇರಿ ವಸಂತ್ ಸ್ಮೃತಿ ಭವನದಲ್ಲಿ ಉನ್ನತ ಬಿಜೆಪಿ ನಾಯಕರನ್ನು ಭೇಟಿ ಮಾಡಿದ ಶಿವಸೇನಾ ನಾಯಕ ಸುಭಾಷ್ ದೇಸಾಯಿ, ಪಕ್ಷದ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಮೈತ್ರಿ ಬಗ್ಗೆ ಮಹತ್ವಪೂರ್ಣ ಮಾತುಕತೆ ನಡೆಸಿದರು. 
 
ಬಿಜೆಪಿಯ ಮಹಾರಾಷ್ಟ್ರ ಚುನಾವಣಾ ಉಸ್ತುವಾರಿ ಓಂ ಮಾಥುರ್‌ ಮತ್ತು ಪಕ್ಷದ ರಾಜ್ಯಾಧ್ಯಕ್ಷ ದೇವೇಂದ್ರ ಫಡ್ನವಿಸ್, ವಿಧಾನಸಭೆಯ ಪ್ರತಿಪಕ್ಷ ನಾಯಕ ಏಕನಾಥ್‌ ಖಾಡ್ಸೆ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ವಿನೋದ್‌ ತಾವ್ಡೆ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು.
 
ಎರಡೂ ಪಕ್ಷಗಳ ನಾಯಕರು ಸಭೆ ಸೇರಿ ಮೈತ್ರಿ ಉಳಿಸಿಕೊಳ್ಳುವುದಕ್ಕಾಗಿ ಭಿನ್ನಮತ ಬಗೆಹರಿಸುವ ಕಸರತ್ತು ನಡೆಸಿದರು.
 
"ಎರಡೂ ಪಕ್ಷಗಳು ಮೈತ್ರಿಯನ್ನು ಉಳಿಸಿಕೊಳ್ಳುವುದರ ಕಡೆ ಒಲವು ತೋರಿದವು. 25 ವರ್ಷದ ಮೈತ್ರಿಯನ್ನು ಮುರಿಯಲು ಯಾವೊಬ್ಬ ನಾಯಕರು ಇಷ್ಟ ಪಡಲಿಲ್ಲ" ಎಂದು ವಿನೋದ್ ತಾವ್ಡೆ ಹೇಳಿದ್ದಾರೆ. 
 
"ಮೈತ್ರಿಯನ್ನು ಮುಂದುವರೆಸಬೇಕೆನ್ನುವುದು ಬಿಜೆಪಿ ಮತ್ತು ಸೇನೆಯ ಜಂಟಿ ನಿರ್ಧಾರ. ಸಾಮಾನ್ಯ ನಾಗರಿಕ ರಾಜ್ಯದಲ್ಲಿ ಕಾಂಗ್ರೆಸ್-ಎನ್‌ಸಿಪಿಯನ್ನು ಸರ್ಕಾರವನ್ನು ಸೋಲಿಸಲು ಬಯಸುತ್ತಿದ್ದಾನೆ" ಎಂದು ತಾವ್ಡೆ ತಿಳಿಸಿದ್ದಾರೆ.
 
ಈಗ ಎಲ್ಲಾ ಕಣ್ಣುಗಳು ಕಾಂಗ್ರೆಸ್ ಎನ್‌ಸಿಪಿ ಮೈತ್ರಿಕೂಟದಲ್ಲಿ ನಡೆಯುತ್ತಿರುವ ಸೀಟು ಹಂಚಿಕೆ ಬಿಕ್ಕಟ್ಟಿನ ಕಡೆ ಹರಿದಿದೆ.
 
ಮಹಾರಾಷ್ಟ್ರದಲ್ಲಿ ಬರುವ ಅಕ್ಟೋಬರ್ 15 ರಂದು ವಿಧಾನ ಸಭಾ ಚುನಾವಣೆಗಳು ನಡೆಯಲಿದ್ದು, 19 ರಂದು ಫಲಿತಾಂಶ ಹೊರ ಬೀಳಲಿದೆ.

ವೆಬ್ದುನಿಯಾವನ್ನು ಓದಿ