ಬಿಜೆಪಿ ಮತ್ತು ಶಿವಸೇನೆ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿವೆ: ರಾಹುಲ್ ಗಾಂಧಿ

ಭಾನುವಾರ, 27 ಜುಲೈ 2014 (16:02 IST)
ಬಿಜೆಪಿ ಮತ್ತು ಶಿವಸೇನೆಯ ಮೇಲೆ ಪ್ರಖರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ  ರಾಹುಲ್ ಗಾಂಧಿ ಆ ಎರಡು ಮಿತ್ರಪಕ್ಷಗಳು ದೇಶವನ್ನು ಒಡೆಯಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ. 

ಗೋವಾದ ಉಪಮುಖ್ಯಮಂತ್ರಿ ಫ್ರಾನ್ಸಿಸ್ ಡಿಸೋಜಾ  ಅವರ ಹಿಂದು ರಾಷ್ಟ್ರ ಕುರಿತಾದ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಹುಲ್ " ಬಿಜೆಪಿ ಮತ್ತು ಶಿವಸೇನೆಗಳ ನಡುವೆ ವ್ಯತ್ಯಾಶವಿಲ್ಲ. ಅವೆರಡು ಪಕ್ಷಗಳು ದೇಶವನ್ನು ಒಡೆಯುವ ದಿಸೆಯಲ್ಲಿ ಕೆಲಸ ಮಾಡುತ್ತಿವೆ. ಅವರ ಈ ಉದ್ದೇಶದ ವಿರುದ್ಧ ಕಾಂಗ್ರೆಸ್ ಹೋರಾಡುತ್ತಿದೆ" ಎಂದು ಹೇಳಿದ್ದಾರೆ. 
 
ಗೋವಾದ ಸಮುದ್ರ ತೀರಗಳಲ್ಲಿ ಬಿಕಿನಿಗೆ ನಿಷೇಧ ಹೇರಬೇಕು  ಎಂದು ಒತ್ತಾಯಿಸುವುದರ ಮೂಲಕ ಗೋವಾದ ಮಂತ್ರಿ ಸುದೀನ್ ಧವಳೀಕರ್  ವಿವಾದವನ್ನು ಸೃಷ್ಟಿಸಿದ ಬೆನ್ನ ಹಿಂದೆಯೇ, ಅವರ ಸಹೋದರ, ಸಹೋದ್ಯೋಗಿ  ಮಂತ್ರಿ ದೀಪಕ್ ಧವಳೀಕರ್ "ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸಲಿದ್ದಾರೆ" ಎಂದು ವಿಧಾನಸಭೆಯಲ್ಲಿ ಹೇಳುವ ಮೂಲಕ ವಿವಾದವನ್ನು ಹುಟ್ಟು ಹಾಕಿದ್ದರು. ಅದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. 
 
ಅವರ ಮಾತನ್ನು ಸಮರ್ಥಿಸಿಕೊಂಡಿದ್ದ ಗೋವಾದ ಉಪಮುಖ್ಯಮಂತ್ರಿ ಬಿಜೆಪಿ ನಾಯಕ "ಫ್ರಾನ್ಸಿಸ್ ಡಿಸೋಜಾ ಭಾರತ ಹಿಂದು ದೇಶವಾಗಿದೆ.ನನ್ನನ್ನು ನಾನು ಹಿಂದು ಕ್ರಿಶ್ಚಿಯನ್ ಎಂದು ಗುರುತಿಸುತ್ತೇನೆ.ಶತ ಶತಮಾನಗಳಿಂದಲೂ ಭಾರತ ಹಿಂದು ರಾಷ್ಟ್ರವಾಗಿದೆ ಮುಂದೆಯೂ ಹಿಂದು ರಾಷ್ಟ್ರವಾಗಿರುತ್ತದೆ. ಹಿಂದು ರಾಷ್ಟ್ರವನ್ನು ಸೃಷ್ಟಿಸುವ ಅಗತ್ಯವಿಲ್ಲ" ಎಂದು ಹೇಳಿದ್ದರು. 
 
ಡಿಸೋಜಾ ಹೇಳಿಕೆ ಗೋವಾ ವಿಧಾನಸಭೆಯಲ್ಲಿ ವ್ಯಾಪಕ ವಿರೋಧಕ್ಕೆ ಗುರಿಯಾಗಿದ್ದು,  ಸ್ಥಳೀಯ ಕಾಂಗ್ರೆಸ್ ಮತ್ತು ಎನ್‌ಸಿಪಿಗಳು ಅವರನ್ನು ಮಂತ್ರಿಮಂಡಲದಿಂದ ವಜಾ ಮಾಡುವಂತೆ ಆಗ್ರಹಿಸಿವೆ. "ನಮ್ಮ ದೂರಿನ ಮೇಲೆ ಕ್ರಮ ಕೈಗೊಳ್ಳಲು ರಾಜ್ಯಪಾಲರು ವಿಫಲರಾದರೆ ನಾವು ನ್ಯಾಯಾಲಯದ ಮೆಟ್ಟಿಲೇರುತ್ತೇವೆ. ಇದು ಸಂಪೂರ್ಣವಾಗಿ ಸಂವಿಧಾನಕ್ಕೆ ವಿರುದ್ಧವಾಗಿದೆ. ನಮ್ಮ ಸಂವಿಧಾನ ಭಾರತ ಜಾತ್ಯಾತೀತ ರಾಷ್ಟ್ರ ಎಂಬುದನ್ನು ಸ್ಪಷ್ಟ ಪಡಿಸಿದೆ" ಎಂದು ಗೋವಾ ಕಾಂಗ್ರೆಸ್  ಸಮಿತಿಯ ಅಧ್ಯಕ್ಷರಾದ  ಜೊನ್ ಫರ್ನಾಂಡಿಸ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ