ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ:ಎಡಪಕ್ಷಗಳ ವಿರುದ್ಧ ಬಿಜೆಪಿ ವಾಗ್ದಾಳಿ

ಮಂಗಳವಾರ, 16 ಫೆಬ್ರವರಿ 2016 (17:53 IST)
ಕೇರಳದಲ್ಲಿ 27 ವರ್ಷ ವಯಸ್ಸಿನ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆಗೈದಿರುವ ಘಟನೆ ನೋಡಿದಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ಆರೆಸ್ಸೆಸ್ ಪ್ರಭಾವದಿಂದ ಎಡಪಕ್ಷಗಳು ಆತಂಕಗೊಂಡು, ರಾಜಕೀಯ ಹತ್ಯೆ ನಡೆಸಿ ತುಳಿಯುವ ಷಡ್ಯಂತ್ರ ನಡೆಸಿವೆ ಎನ್ನುವುದು ಸಾಬೀತಾಗುತ್ತದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
 
ಬಿಜೆಪಿ ರಾಷ್ಟ್ರೀಯ ವಕ್ತಾರ ಎಂ.ಜೆ.ಅಕ್ಬರ್ ಮಾತನಾಡಿ, ರಾಜ್ಯದಲ್ಲಿ ಹೆಚ್ಚುತ್ತಿರುವ ರಾಜಕೀಯ ಹಿಂಸಾಚಾರ ಮತ್ತು ಹತ್ಯೆಗಳ ಬಗ್ಗೆ ಹೇಳಿಕೆ ನೀಡಲು ಕೂಡಾ ಎಡಪಕ್ಷಗಳು ಅಸಮರ್ಥವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಕೇರಳದಲ್ಲಿ ಎಡಪಕ್ಷಗಳು ನಿರಂತರವಾಗಿ ಹತ್ಯೆ ಮತ್ತು ಹಿಂಸಾಚಾರದಲ್ಲಿ ತೊಡಗಿವೆ. ಸುಮಾರು 200 ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ಎಡಪಕ್ಷಗಳಿಗೆ ಜನತೆಯ ಮುಂದೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಲೋಕಸಭೆ ಸಂಸದ, ಬಿಜೆಪಿ ವಕ್ತಾರ ಅಕ್ಬರ್ ಕಿಡಿಕಾರಿದ್ದಾರೆ.
 
ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಜೆಪಿ ಜನಪ್ರಿಯತೆಯಿಂದ ತತ್ತರಿಸಿದ ಎಡಪಕ್ಷಗಳು, ಬಿಜೆಪಿ ಕಾರ್ಯಕರ್ತರ ಹತ್ಯೆ, ಹಿಂಸಾಚಾರದಂತಹ ಕೃತ್ಯದಲ್ಲಿ ತೊಡಗಿದೆ. ಆದರೆ, ಮುಂಬರುವ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
 
ಕಣ್ಣೂರು ಜಿಲ್ಲೆಯ ಪಾಪಿನೇಸರಿ ಗ್ರಾಮದಲ್ಲಿ ವೃದ್ಧ ತಂದೆ ತಾಯಿ ಎದುರಿಗೆ 27 ವರ್ಷ ವಯಸ್ಸಿನ ಆರೆಸ್ಸೆಸ್ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ