ಜೆಎನ್‌ಯು ವಿವಾದ: ಎಬಿವಿಪಿ ರಕ್ಷಿಸಲು ಬಿಜೆಪಿ ಹರಸಾಹಸ: ಕಾಂಗ್ರೆಸ್ ಲೇವಡಿ

ಸೋಮವಾರ, 15 ಫೆಬ್ರವರಿ 2016 (17:24 IST)
ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಗೆ ಲಷ್ಕರ್-ಎ-ತೊಯಿಬಾ ಮುಖ್ಯಸ್ಥ ಹಫೀಜ್ ಸಯೀದ್ ಬೆಂಬಲ ಸೂಚಿಸಿದ್ದರು ಎಂದು ಕೇಂದ್ರ ಗೃಹ ಖಾತೆ ಸಚಿವ ರಾಜನಾಥ್ ಸಿಂಗ್ ನೀಡಿದ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪಕ್ಷ, ಎಬಿವಿಪಿ ಬಿಜೆಪಿಯ ವಿದ್ಯಾರ್ಥಿ ಘಟಕ ವಿಭಾಗವಾಗಿದ್ದರಿಂದ ಅದನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ತಿರುಗೇಟು ನೀಡಿದೆ. 
 
ಕೇಂದ್ರ ಗೃಹ ಖಾತೆ ಸಚಿವರು ನೀಡಿದ ಹೇಳಿಕೆ ಹಾಸ್ಯಾಸ್ಪದವಾಗಿದೆ. ಗಂಭೀರವಾದ ವಿಷಯವನ್ನು ಲಘುವಾದ ದಾಟಿಯಲ್ಲಿ ಹೇಳಿದ್ದಾರೆ. ಎಬಿವಿಪಿಯನ್ನು ರಕ್ಷಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಕೆಲ ವಿಡಿಯೋಗಳ ಪ್ರಕಾರ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದವರು ಎಬಿವಿಪಿ ವಿದ್ಯಾರ್ಥಿಗಳು ಎನ್ನುವುದು ಬಹಿರಂಗವಾಗಿದೆ ಎಂದು ಕಾಂಗ್ರೆಸ್ ಮುಖಂಡ  ಸಂದೀಪ್ ದೀಕ್ಷಿತ್ ಹೇಳಿದ್ದಾರೆ.
 
ಕೇಂದ್ರ ಸರಕಾರ ಅನಗತ್ಯವಾಗಿ ಪ್ರತಿಕ್ರಿಯೆ ನೀಡುತ್ತಿರುವುದಲ್ಲದೇ ಜೆಎನ್‌ಯುನಂತಹ ಶ್ರೇಷ್ಠ ಸಂಸ್ಥೆಗಳನ್ನು ನಾಶಮಾಡುವ ಹುನ್ನಾರ ಹೊಂದಿದೆ ಎಂದು ಆರೋಪಿಸಿದರು.
 
ಏತನ್ಮಧ್ಯೆ, ಕೇಂದ್ರ ಸಚಿವ ರಾಜನಾಥ್ ಸಿಂಗ್ ತಾವು ನೀಡಿದ ಹೇಳಿಕೆಗೆ ಸಾಕ್ಷ್ಯಾಧಾರಗಳನ್ನು ನೀಡಲಿ ಎಂದು ಮತ್ತೊಬ್ಬ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಪ್ರಶ್ನಿಸಿದ್ದಾರೆ.
 
ಲಷ್ಕರ್ ಉಗ್ರ ಹಫೀಜ್ ಸಯೀದ್, ಜೆಎನ್‌ಯು ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದಾನೆ ಎಂದಾದಲ್ಲಿ ಕೇಂದ್ರ ಗೃಹ ಸಚಿವರು ಯಾಕೆ ಸಾಕ್ಷ್ಯಗಳನ್ನು ಬಹಿರಂಗಪಡಿಸುತ್ತಿಲ್ಲ. ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟಿಕರಣ ನೀಡಲಿ ಎಂದು ತಿವಾರಿ ಗುಡುಗಿದ್ದಾರೆ.  

ವೆಬ್ದುನಿಯಾವನ್ನು ಓದಿ