ಉಪರಾಷ್ಟ್ರಪತಿ ಅನ್ಸಾರಿ ವಿರುದ್ಧ ಬಿಜೆಪಿ, ವಿಹೆಚ್‌ಪಿ ವಾಗ್ದಾಳಿ

ಬುಧವಾರ, 2 ಸೆಪ್ಟಂಬರ್ 2015 (17:13 IST)
ಮುಸ್ಲಿಂ ಸಮುದಾಯದವರು ತಾರತಮ್ಯವನ್ನೆದುರಿಸುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳಿರುವ ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ ಅವರ ವಿರುದ್ಧ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷದ್ ವಾಗ್ದಾಳಿ ನಡೆಸಿವೆ. 

ಅಖಿಲ ಭಾರತ ಮಜ್ಲಿಸ್-ಇ-ಮುಶಾವ್ವರಾತ್ ಸುವರ್ಣ ವರ್ಷಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅನ್ಸಾರಿಯವರು, 'ದೇಶದ ಮುಸ್ಲಿಮರು ಐಡೆಂಟಿಟಿ, ಭದ್ರತೆಯ ಸಮಸ್ಯೆಯ ಎದುರಿಸುತ್ತಿದ್ದು, ಸರಕಾರ ಸಕರಾತ್ಮಕ ಕ್ರಮಗಳ ಮೂಲಕ ಅದನ್ನು ನಿವಾರಿಸಬೇಕಿದೆ ಮತ್ತು ಮೋದಿಯವರ ಜನಪ್ರಿಯ ಕಾರ್ಯಕ್ರಮದಲ್ಲಿ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್'  ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದವರು ಒಳಗೊಳ್ಳುವಂತೆ ನೋಡಿಕೊಳ್ಳಬೇಕಿದೆ', ಎಂದು ಆಗ್ರಹಿಸಿದ್ದರು.
 
ಅವರ ಈ ಮಾತುಗಳು ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು,"ಅನ್ಸಾರಿಯವರು ಹೊಂದಿರುವ ಸಾಂವಿಧಾನಿಕ ಸ್ಥಾನಕ್ಕೆ  ತಕ್ಕ  ಮಾತುಗಳು ಇವಲ್ಲ ಎಂದು ಆರೋಪಿಸಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ವರ್ಗಿಯಾ, "ಉಪ ರಾಷ್ಟ್ರಪತಿ ಹುದ್ದೆಯಂತಹ ಸಾಂವಿಧಾನಿಕ ಸ್ಥಾನವನ್ನು ಹೊಂದಿರುವವರು ಇಡೀ ದೇಶವನ್ನು ಪ್ರತಿನಿಧಿಸುವವರು. ಒಂದು ನಿರ್ದಿಷ್ಟಸಮುದಾಯಕ್ಕೆ ಮಾತ್ರ ಅವರು ಸೀಮಿತರಲ್ಲ", ಎಂದಿದ್ದಾರೆ. 
 
ಅನ್ಸಾರಿಯವರ ಹೇಳಿಕೆಯನ್ನು ಖಂಡಿಸಿರುವ ವಿಹೆಚ್‌ಪಿ ವಕ್ತಾರ ಸುರೇಂದ್ರ ಜೈನ್ 'ಮುಸಲ್ಮಾನರು ತಾರತಮ್ಯ ಎದುರಿಸುತ್ತಿದ್ದಾರೆ ಎಂದಿರುವ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು, ಇಲ್ಲವೇ ಕ್ಷಮೆಯಾಚಿಸಬೇಕು ಅಥವಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಹೋಗಲಿ', ಎಂದು ಆಗ್ರಹಿಸಿದ್ದಾರೆ. 
 
'ಇಸ್ಲಾಂ ಸಮುದಾಯದವರು ಭಾರತದ ಅತಿದೊಡ್ಡ ಧಾರ್ಮಿಕ ಅಲ್ಪಸಂಖ್ಯಾತರು. ಇಸ್ಲಾಮಿಕ್ ದೇಶಗಳಲ್ಲಿ ಅವರಿಗೆ ನೀಡಲಾಗಿರುವ ಹಕ್ಕುಗಳಿಗಿಂತ ಹೆಚ್ಚು ಸಾಂವಿಧಾನಿಕ ಹಕ್ಕುಗಳನ್ನು ಭಾರತದಲ್ಲಿ ನೀಡಲಾಗಿದೆ. ಅವರಷ್ಟು ಹಕ್ಕುಗಳನ್ನು ಬಹುಸಂಖ್ಯಾತ ಹಿಂದೂಗಳು ಸಹ ಪಡೆದಿಲ್ಲ, ಎಂದು ಜೈನ್ ಅಭಿಪ್ರಾಯ ಪಟ್ಟಿದ್ದಾರೆ. 

ವೆಬ್ದುನಿಯಾವನ್ನು ಓದಿ