ಪೊಳ್ಳು ಬೆದರಿಕೆ ಬೇಡ, ತಾಕತ್ತಿದ್ರೆ ಕಪ್ಪು ಹಣವಿದ್ದವರ ಹೆಸರು ಬಹಿರಂಗಪಡಿಸಿ: ಬಿಜೆಪಿಗೆ ಕಾಂಗ್ರೆಸ್ ಸವಾಲ್

ಬುಧವಾರ, 22 ಅಕ್ಟೋಬರ್ 2014 (17:05 IST)
ತಪ್ಪುಹಣ ಹೊಂದಿದವರ ಹೆಸರುಗಳನ್ನು ಬಹಿರಂಗಪಡಿಸಿದಲ್ಲಿ ಕಾಂಗ್ರೆಸ್‌ ಪೇಚಾಟಕ್ಕೆ ಸಿಲುಕಲಿದೆ ಎನ್ನುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ತಾಕತ್ತಿದ್ರೆ ಸಂಪೂರ್ಣ ಮಾಹಿತಿಯೊಂದಿಗೆ ಹೆಸರುಗಳನ್ನು ಬಹಿರಂಗಪಡಿಸಿ ಎಂದು ಸವಾಲ್ ಹಾಕಿದೆ.
 
ನರೇಂದ್ರ ಮೋದಿ ನೇತೃತ್ವದ ಸರಕಾರ ಅರ್ಧ ಸತ್ಯ ಮತ್ತು ಕೆಲವೇ ಹೆಸರುಗಳನ್ನು ಬಹಿರಂಗಪಡಿಸುವ ಹೇಳಿಕೆಗಳು ಬಿಜೆಪಿಯ ಷಡ್ಯಂತ್ರ ಬಯಲುಗೊಳಿಸುವೆ ಎಂದು ತಿರುಗೇಟು ನೀಡಿದೆ.
 
ಇಂತಹ ಪೊಳ್ಳು ಬೆದರಿಕೆಗಳಿಂದ ಕಾಂಗ್ರೆಸ್ ಪಕ್ಷವನ್ನು ಬ್ಲ್ಯಾಕ್‌ಮೇಲ್ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ನಾಯಕರಿಗೆ ಮೀರಿದ ಪಕ್ಷವಾಗಿದೆ. ಕಪ್ಪು ಹಣ ಹೊಂದಿದ್ದವರ ಮೇಲೆ ಮೋದಿ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳುವುದನ್ನು ಸ್ವಾಗತಿಸುತ್ತಿವೆ. ಆದರೆ, ಅರ್ಧ ಸತ್ಯ, ಸೇಡಿನ ಮನೋಭಾವ, ಪಕ್ಷಪಾತ ಧೋರಣೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಎಐಸಿಸಿ ಸಂಪರ್ಕ ವಿಭಾಗದ ಮುಖ್ಯಸ್ಥ ಅಜಯ್ ಮಾಕೆನ್ ಹೇಳಿದ್ದಾರೆ.
 
ವಿದೇಶಿ ಬ್ಯಾಂಕ್‌‌ಗಳಲ್ಲಿರುವ ಕಪ್ಪು ಹಣ ಕಾಂಗ್ರೆಸ್ ಮತ್ತು ಅಧಿಕಾರರೂಢ ಬಿಜೆಪಿ ಪಕ್ಷಗಳ ನಡುವಣ ಸಮರಕ್ಕೆ ನಾಂದಿಯಾಗಿದೆ. ಯುಪಿಎ ಸರಕಾರದಂತೆ ಮೋದಿ ಸರಕಾರ ಕೂಡಾ ಕೆಲ ದಿನಗಳ ಹಿಂದೆ ಕಪ್ಪು ಹಣ ಹೊಂದಿದ್ದವರ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಹೇಳಿಕೆ ನೀಡಿರುವುದನ್ನು ಸ್ಮರಿಸಬಹುದು. 
 
ಮುಂಬರುವ ಕೆಲವೇ ದಿನಗಳಲ್ಲಿ ಕಪ್ಪು ಹಣ ಹೊಂದಿದವರ ಹೆಸರುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದು.  ಕಪ್ಪು ಹಣ ಹೊಂದಿದವರ ಹೆಸರುಗಳನ್ನು ಬಹಿರಂಗಪಡಿಸುವುದರಿಂದ ಬಿಜೆಪಿಗೆ ಯಾವುದೇ ತೊಂದರೆಯಿಲ್ಲ. ಆದರೆ, ವಿಪಕ್ಷ ಕಾಂಗ್ರೆಸ್ ಇಕ್ಕಟ್ಟಿನಲ್ಲಿ ಸಿಲುಕಲಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಲೇವಡಿ ಮಾಡಿದ್ದರು. 
 

ವೆಬ್ದುನಿಯಾವನ್ನು ಓದಿ