ಸರಕಾರ ಚಾಪೆ ಕೆಳಗೆ ತೂರಿದ್ರೆ ಭ್ರಷ್ಟರು ರಂಗೋಲಿ ಕೆಳಗೆ: ಸ್ವಿಸ್‌ ಬ್ಯಾಂಕ್‌ನಿಂದ ಹಣ ವರ್ಗಾವಣೆ

ಸೋಮವಾರ, 1 ಸೆಪ್ಟಂಬರ್ 2014 (15:19 IST)
ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣವನ್ನು ವಾಪಸ್‌ ತರಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿರುವಾಗಲೇ, ಕಳೆದ ಆರು ವರ್ಷಗಳ ಅವಧಿಯಲ್ಲಿ ಸ್ವಿಜರ್ಲೆಂಡ್‌ನ‌ ಬ್ಯಾಂಕುಗಳಿಂದ 25 ಲಕ್ಷ ಕೋಟಿ ರೂ.ನಷ್ಟು ಅಗಾಧ ಹಣ ಬೇರೆಡೆ ಸಾಗಣೆಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ಪೈಕಿ ಭಾರತೀಯರ ಹಣ ಎಷ್ಟು ಎಂಬ ಬಗ್ಗೆ ವಿವರ ಗೊತ್ತಾಗಿಲ್ಲ. 
 
ಸ್ವಿಜರ್ಲೆಂಡ್‌ನ‌ 90 ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ಸ್ವಿಜರ್ಲೆಂಡ್‌ ನ್ಯಾಷನಲ್‌ ಬ್ಯಾಂಕಿನ ವಾರ್ಷಿಕ ವರದಿ ಮತ್ತಿತರೆ ಮಾಹಿತಿಯನ್ನು ವಿಶ್ಲೇಷಿಸಿ ಸ್ವಿಜರ್ಲೆಂಡ್‌ ಮೂಲದ್ದೇ ಆಗಿರುವ ಜಾಗತಿಕ ಕನ್ಸಲ್ಟೆನ್ಸಿ ಸಂಸ್ಥೆ ಪ್ರೈಸ್‌ವಾಟರ್‌ಹೌಸ್‌ಕೂಪರ್ ಸಿದ್ಧಪಡಿಸಿರುವ ವರದಿ ಈ ಮಾಹಿತಿಯನ್ನು ನೀಡಿದೆ. 
 
25 ಲಕ್ಷ ಕೋಟಿ ರೂ. ಪೈಕಿ 7 ಲಕ್ಷ ಕೋಟಿ ರೂ.ನಷ್ಟು ಹಣ ದಂಡದ ರೂಪದಲ್ಲಿ ಪಾವತಿಯಾಗಿದೆ. ತಾವು ಕಪ್ಪು ಹಣ ಹೊಂದಿರುವುದಾಗಿ ತಿಳಿಸಿ, ಗ್ರಾಹಕರು ತಮ್ಮ ತಮ್ಮ ದೇಶಗಳಲ್ಲಿ ಇಷ್ಟೊಂದು ದಂಡ ಕಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌ ನೀಡಿದ್ದ ಮಾಹಿತಿ ಅನ್ವಯ, 2013ನೇ ಸಾಲಿನಲ್ಲಿ ಸ್ವಿಸ್‌ ಬ್ಯಾಂಕುಗಳಲ್ಲಿ ವಿದೇಶಿಯರು 90 ಲಕ್ಷ ಕೋಟಿ ರೂ.ನಷ್ಟು ಹಣ ಹೊಂದಿದ್ದರು. ಇದರಲ್ಲಿ ಭಾರತೀಯರ ಪಾಲು 14000 ಕೋಟಿ ರೂ. 
 

ವೆಬ್ದುನಿಯಾವನ್ನು ಓದಿ