ಕಪ್ಪು ಹಣ: 627 ಖಾತೆಗಳಲ್ಲಿ 287 ಖಾತೆಗಳಲ್ಲಿರುವುದು ಝಿರೋ ಬ್ಯಾಲೆನ್ಸ್!

ಶುಕ್ರವಾರ, 31 ಅಕ್ಟೋಬರ್ 2014 (19:00 IST)
ದೇಶಾದ್ಯಂತ ತೀವೃ ಕುತೂಹಲ ಕೆರಳಿಸಿರುವ ಕಪ್ಪುಹಣದ ಕುರಿತಂತೆ ಬಂದ ವರದಿಗಳ ಪ್ರಕಾರ ಕೇಂದ್ರ ಸರ್ಕಾರ  ಸುಪ್ರೀಂಕೋರ್ಟ್‌ಗೆ ನೀಡಿರುವ  627 ಕಾಳಧನ ಖಾತೆದಾರರ ಪೈಕಿ ಕೇವಲ 27 ಜನರ ಮೇಲೆ ಮಾತ್ರ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ. 

ಮುಂದಿನ ವರ್ಷ ಮಾರ್ಚ್ ತಿಂಗಳೊಳಗೆ ವಿಶೇಷ ತನಿಖಾ ದಳದಿಂದ 627 ಕಪ್ಪು ಹಣ ಖಾತೆದಾರರ ತನಿಖೆ ಪೂರ್ಣಗೊಳ್ಳಲಿದೆ.ಈ ಖಾತೆಗಳೆಲ್ಲವೂ ಜಿನೇವಾದ ಎಚ್ಎಸ್‌ಬಿಸಿ ಬ್ಯಾಂಕ್‌ಗೆ ಸೇರಿದ್ದು‪, ವಿಶೇಷವೆಂದರೆ ಅದರಲ್ಲಿ 289 ಜನರ ಖಾತೆಯಲ್ಲಿ ಇರುವುದು ಝಿರೋ ಬ್ಯಾಲೆನ್ಸ್.
 
ಜತೆಗೆ 13 ಖಾತೆಗಳು ಸಂಸ್ಥೆಗಳು ಮತ್ತು ಟ್ರಸ್ಟ್‌ಗಳಿಗೆ ಸೇರಿವೆ ಮತ್ತು 315 ಖಾತೆಗಳಿಗೆ ತೆರಿಗೆಯನ್ನು ಕಟ್ಟಬಹುದಾಗಿದೆ. 
 
ಇದಲ್ಲದೆ, ಮೂಲಗಳ ಪ್ರಕಾರ 136 ಖಾತೆದಾರರು ತಮ್ಮಲ್ಲಿರುವ ಕಪ್ಪು ಹಣದ ರಕ್ಷಣೆಗಾಗಿ ಸರಕಾರಕ್ಕೆ ತೆರಿಗೆ ಠೇವಣಿ ಕಟ್ಟುತ್ತಿದ್ದಾರೆ.
 
ಕೇಂದ್ರ ಸರಕಾರ ಕಪ್ಪು ಹಣ ದೇಶಕ್ಕೆ ಮರಳಿ ತರುವುದು ಕನಸಿನ ಮಾತು. ಕಪ್ಪು ಹಣ ಹೊಂದಿರುವವರು ಸರಕಾರಕ್ಕೆ ತೆರಿಗೆ ಪಾವತಿಸಿದಲ್ಲಿ ಕೇವಲ 750 ಕೋಟಿ ರೂಪಾಯಿಗಳು ಮಾತ್ರ ಸರಕಾರಕ್ಕೆ ಲಭ್ಯವಾಗಲಿದೆ. 
 
ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರ ಲಕ್ಷಾಂತರ ಕೋಟಿ ರೂಪಾಯಿಗಳ ಹಣವಿದೆ. ಹಣವನ್ನು ಮರಳಿ ತಂದಲ್ಲಿ ದೇಶದ ಪ್ರತಿಯೊಬ್ಬರ ಖಾತೆಗೆ 3 ಲಕ್ಷ ರೂಪಾಯಿ ಜಮಾ ಮಾಡಲಾಗುವುದು ಎನ್ನುವ ಬಿಜೆಪಿಯ ಬೊಗಳೆ ಇದೀಗ ರಗಳೆಯಾದಂತಾಗಿದೆ.  
 
ಕೇಂದ್ರ ಬುಧವಾರ ಸುಪ್ರೀಂಕೋರ್ಟ್‌‌ಗೆ ನೀಡಿರುವ  627 ಕಪ್ಪು ಹಣ ಹೊಂದಿರುವ ಖಾತೆದಾರರು ಜಿನೇವಾದ ಎಚ್ಎಸ್‌ಬಿಸಿ ಬ್ಯಾಂಕಿನಲ್ಲಿ ಖಾತೆಗಳನ್ನು ಹೊಂದಿದ್ದಾರೆ.
 
ಮುಚ್ಚಿದ ಲಕೋಟೆಯಲ್ಲಿ ಮೂರು ಸೆಟ್‌ಗಳಲ್ಲಿ 627  ಖಾತೆದಾರರ ಹೆಸರನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.ಮೊದಲ ಪಟ್ಟಿಯಲ್ಲಿ  ಫ್ರೆಂಚ್ ಅಧಿಕಾರಿಗಳ ಜತೆಗೆ ನಡೆದ ಪತ್ರವ್ಯವಹಾರದ ಕುರಿತ ದಾಖಲೆಗಳಿವೆ, ಎರಡನೇ ಪಟ್ಟಿಯಲ್ಲಿ 627 ಖಾತೆದಾರರ ಹೆಸರುಗಳಿವೆ ಮತ್ತು ಮೂರನೇ ಪಟ್ಟಿಯಲ್ಲಿ ತನಿಖೆಯ ಪ್ರಗತಿಯ ಕುರಿತ ವಿವರವಿದೆ. ಈ ಪಟ್ಟಿಯನ್ನು ಕೋರ್ಟ್ ತೆರೆದು ನೋಡಿಲ್ಲ.
 
ಅದನ್ನು ತೆರೆಯುವ ಅಧಿಕಾರ ಎಸ್ಐಟಿ(ವಿಶೇಷ ತನಿಖಾ ತಂಡ ) ಅಧ್ಯಕ್ಷರಾದ ಎಮ್.ಬಿ.ಷಾ ಮತ್ತು ಉಪಾಧ್ಯಕ್ಷರಾದ ಅರಿಜಿತ್ ಪಸಾಯತ್ ಅವರಿಗೆ ಮಾತ್ರವಿದ್ದು, ಅವರದನ್ನು ತೆರೆಯಲಿದ್ದಾರೆ ಎಂದು ಕೋರ್ಟ್ ಹೇಳಿತ್ತು. ಸುಪ್ರೀಂಕೋರ್ಟ್ ನೇಮಿಸಿರುವ ವಿಶೇಷ ತನಿಖಾ ದಳದ ಭಾಗವಾಗಿರುವ ಇವರಿಬ್ಬರು ಸುಪ್ರೀಂಕೋರ್ಟಿನ ಮಾಜಿ ನ್ಯಾಯಾಧೀಶರಾಗಿದ್ದಾರೆ.ಮುಂದಿನ ತನಿಖೆಯ ಸಂಪೂರ್ಣ ಜವಾಬ್ದಾರಿ ವಿಶೇಷ ತನಿಖಾ ದಳದ್ದಾಗಿದೆ.
 
ಕೆಲವು ಖಾತೆದಾರರು, ತಾವು ಖಾತೆಗಳನ್ನು ಹೊಂದಿರುವ ಬಗ್ಗೆ ಮತ್ತು ತೆರಿಗೆಯನ್ನು ಕಟ್ಟುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಎಚ್.ಎಲ್ ದತ್ತು ನೇತೃತ್ವದ ಪೀಠದ ಮುಂದೆ ಹಾಜರಾಗುವ ಮೊದಲೇ, ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಹೇಳಿದ್ದಾರೆ.
 
ಫ್ರೆಂಚ್ ಸರಕಾರ 2011ರಲ್ಲಿ ಕೇಂದ್ರ ಸರಕಾರಕ್ಕೆ ನೀಡಿರುವ ಖಾತೆದಾರರ ವಿವರಗಳು 2006ರಲ್ಲಿದ್ದ ಖಾತೆಗೆ ಸಂಬಂಧಿಸಿವೆ. ಆ ಖಾತೆಗಳಲ್ಲಿನ ಹೆಚ್ಚಿನ ವ್ಯವಹಾರಗಳು  1999 ಮತ್ತು 2000ರಲ್ಲಿ ನಡೆದಿವೆ. ಈ ಪಟ್ಟಿಯಲ್ಲಿನ ಖಾತೆದಾರರ ಕುರಿತಾದ ತನಿಖೆ ಮಾರ್ಚ್ 31, 2015 ರೊಳಗೆ ಸಂಪನ್ನಗೊಳ್ಳಲಿವೆ ಎಂದು ರೋಹಟಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ