ಕಾಳಧನಿಕರ ಹೆಸರುಗಳು ಕಾಂಗ್ರೆಸ್‌ಗೆ ಪೇಚಾಟಕ್ಕೆ ಸಿಲುಕಿಸಲಿದೆ: ಜೇಟ್ಲಿ

ಬುಧವಾರ, 22 ಅಕ್ಟೋಬರ್ 2014 (14:33 IST)
ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಕೂಡಿಟ್ಟಿರುವ ಭಾರತೀಯರ ಹೆಸರುಗಳನ್ನು ಬಹಿರಂಗ ಪಡಿಸಲು ಯಾವುದೇ ಮುಲಾಜಿಲ್ಲ ಎಂದು ಹೇಳುವ ಮೂಲಕ ನರೇಂದ್ರ ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಕಪ್ಪು ಧನಿಕರ ಹೆಸರನ್ನು ನಾವು ಸುಪ್ರೀಂಕೋರ್ಟ್‌ನಲ್ಲಿ ಬಹಿರಂಗಗೊಳಿಸಿದ ದಿನ ಕಾಂಗ್ರೆಸ್ ನಾಯಕರು ಪೇಚಾಟಕ್ಕೆ ಸಿಲುಕಲಿದ್ದಾರೆ, ಹೊರತು ನಾವಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. 

ಸೋಮವಾರ ರಾತ್ರಿ ತಮ್ಮ ಸರಕಾರದ ಮಂತ್ರಿಗಳಿಗೆ ಭೋಜನ ಕೂಟವನ್ನು ಆಯೋಜಿಸಿದ್ದ ಮೋದಿ, ದೀಪಾವಳಿ ನಂತರ ತಮ್ಮ ಸರಕಾರ ವಿದೇಶದಲ್ಲಿ ಕಪ್ಪು ಹಣ ಹೊಂದಿರುವ ಕೆಲವರ ಹೆಸರುಗಳನ್ನು ಸುಪ್ರೀಂಕೋರ್ಟ್‌ನಲ್ಲಿ ಬಹಿರಂಗ ಪಡಿಸುವುದಾಗಿ ಹೇಳಿದ್ದರು .
 
ತಮ್ಮ ಅಧಿಕೃತ ನಿವಾಸದಲ್ಲಿ ಕಳೆದ ಸೋಮವಾರ ರಾತ್ರಿ ಆಯೋಜಿಸಿದ್ದ ಭೋಜನಕೂಟದ ವೇಳೆ ಮಾತನಾಡುತ್ತಿದ್ದ ಪ್ರಧಾನಿ  "ಕುಚ್ ನಾಮ್ ಬತಾಯೇಂಗೆ (ಕೆಲವರ ಹೆಸರನ್ನು ಬಹಿರಂಗ ಪಡಿಸುತ್ತೇವೆ) " ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
 
ಲೋಕಸಭೆಯ ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದ ಚುನಾವಣಾ ಪ್ರಣಾಳಿಕೆಯಲ್ಲಿ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪುಹಣವನ್ನು ವಾಪಸ್ ತರುವುದಾಗಿ ಬಿಜೆಪಿ ಹೇಳಿಕೊಂಡಿತ್ತು. ಆದರೆ ಇತ್ತೀಚಿಗೆ ಸುಪ್ರೀಂ ಕೋರ್ಟ್‌ಗೆ ಕೊಟ್ಟ ಹೇಳಿಕೆಯಲ್ಲಿ, ಅವಳಿ ತೆರಿಗೆ ತಪ್ಪಿಸುವಿಕೆ ಒಪ್ಪಂದಗಳು ಕಪ್ಪು ಹಣದ  ಕುರಿತು ಮುಂದಿನ ನಡೆಯನ್ನು ಇಡಲು ತೊಡಕಾಗಿದೆ ಎಂದು ಸರ್ಕಾರ ತಿಳಿಸಿತ್ತು.
 
ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರದ ಈ ಹೇಳಿಕೆ ಭಾರಿ ಕೋಲಾಹಲವನ್ನು ಎಬ್ಬಿಸಿತ್ತು. ಕಪ್ಪುಹಣದ ಕುರಿತಂತೆ ಮೋದಿ ಸರಕಾರ ಇಬ್ಬಗೆ ನೀತಿಯನ್ನು ಪ್ರದರ್ಶಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.

ವೆಬ್ದುನಿಯಾವನ್ನು ಓದಿ