ಕಪ್ಪು ಹಣ ಕುರಿತಂತೆ ಕೆಲವು ಹೆಸರು ಬಹಿರಂಗಪಡಿಸುತ್ತೇವೆ: ಮೋದಿ

ಮಂಗಳವಾರ, 21 ಅಕ್ಟೋಬರ್ 2014 (15:18 IST)
ಸೋಮವಾರ ರಾತ್ರಿ ತಮ್ಮ ಸರಕಾರದ ಸಚಿವರಿಗೆ ಭೋಜನ ಕೂಟ ನಡೆಸಿದ್ದ ಪ್ರಧಾನಿ ಮೋದಿಯವರು ವಿದೇಶದಲ್ಲಿ ಕಪ್ಪುಹಣವನ್ನು ಕೂಡಿಟ್ಟಿರುವವರ ಪೈಕಿ ಕೆಲವರ ಹೆಸರನ್ನು ದೀಪಾವಳಿಯ ನಂತರ ಸುಪ್ರೀಂ ಕೋರ್ಟ್‌ಗೆ ತಿಳಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ತಮ್ಮ ಅಧಿಕೃತ ನಿವಾಸದಲ್ಲಿ ಕಳೆದ ಸೋಮವಾರ ರಾತ್ರಿ ಆಯೋಜಿಸಿದ್ದ ಭೋಜನಕೂಟದ ವೇಳೆ ಮಾತನಾಡುತ್ತಿದ್ದ ಪ್ರಧಾನಿ  "ಕುಚ್ ನಾಮ್ ಬತಾಯೇಂಗೆ (ಕೆಲವರ ಹೆಸರನ್ನು ಬಹಿರಂಗ ಪಡಿಸುತ್ತೇವೆ) " ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
 
ಲೋಕಸಭೆಯ ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದ ಚುನಾವಣಾ ಪ್ರಣಾಳಿಕೆಯಲ್ಲಿ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪುಹಣವನ್ನು ವಾಪಸ್ ತರುವುದಾಗಿ ಬಿಜೆಪಿ ಹೇಳಿಕೊಂಡಿತ್ತು. ಆದರೆ ಇತ್ತೀಚಿಗೆ ಸುಪ್ರೀಂ ಕೋರ್ಟ್‌ಗೆ ಕೊಟ್ಟ ಹೇಳಿಕೆಯಲ್ಲಿ, ಅವಳಿ ತೆರಿಗೆ ತಪ್ಪಿಸುವಿಕೆ ಒಪ್ಪಂದಗಳು ಕಪ್ಪು ಹಣದ  ಕುರಿತು ಮುಂದಿನ ನಡೆಯನ್ನು ಇಡಲು  ತೊಡಕಾಗಿದೆ ಎಂದು ಸರ್ಕಾರ ತಿಳಿಸಿತ್ತು.
 
ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರದ ಈ ಹೇಳಿಕೆ ಭಾರಿ ಕೋಲಾಹಲವನ್ನು ಎಬ್ಬಿಸಿತ್ತು. ಕಪ್ಪುಹಣದ ಕುರಿತಂತೆ ಮೋದಿ ಸರಕಾರ ಇಬ್ಬಗೆ ನೀತಿಯನ್ನು ಪ್ರದರ್ಶಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.
 
 ಕಳೆದ ವಾರ, ಪತ್ರಿಕಾಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ ಸರ್ಕಾರ ಯು- ಟರ್ನ್ ತೆಗೆದುಕೊಂಡಿದೆ ಎಂಬ ವಿರೋಧ ಪಕ್ಷದ ಆರೋಪಗಳನ್ನು ನಿರಾಕರಿಸಿದ್ದರು. ಭಾರತದ ಕಡೆಗಿನ ಸ್ವತಂತ್ರ ತನಿಖೆ ಸಂದರ್ಭದಲ್ಲಿ ಬ್ಯಾಂಕ್ ಖಾತೆ ಹೆಸರುಗಳು ಸೇರಿದಂತೆ ಯಾವುದೇ ಮಾಹಿತಿಗಳನ್ನು ಎನ್‌ಡಿಎ ಸರಕಾರ ತಡೆ ಹಿಡಿಯುವುದಿಲ್ಲ ಎಂದು ಅವರು ಹೇಳಿದ್ದರು. 

ವೆಬ್ದುನಿಯಾವನ್ನು ಓದಿ