ಸಂಸತ್ ಕಲಾಪ ರಗಳೆಗೆ ಬಿಜೆಪಿ ಕಾಂಗ್ರೆಸ್ ನೇರ ಹೊಣೆ: ದೇವೇಗೌಡ

ಮಂಗಳವಾರ, 4 ಆಗಸ್ಟ್ 2015 (19:47 IST)
ಮುಂಗಾರು ಅಧಿವೇಶನ ಕಲಾಪ ಅಸ್ಥವ್ಯಸ್ಥವಾಗಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೇ ನೇರ ಹೊಣೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಗುಡುಗಿದ್ದಾರೆ.
 
ಕಲಾಪವನ್ನು ಬಹಿಷ್ಕರಿಸುವುದರಿಂದ ಅಥವಾ ಅಡ್ಡಿಪಡಿಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಉಭಯ ಪಕ್ಷಗಳು ಅರಿಯಬೇಕು ಎಂದು ಸಲಹೆ ನೀಡಿದ್ದಾರೆ.
 
ಹಿಂದೆ ಕೂಡಾ ಹಲವಾರು ಬಾರಿ ಸಂಸತ್ ಕಲಾಪಕ್ಕೆ ಅಡ್ಡಿಯಾಗಿರುವುದನ್ನು ನಾವು ನೋಡಿದ್ದೇವೆ. ಕಲಾಪ ಹಾಳುಗೆಡುವುದಕ್ಕೆ ಎರಡು ರಾಷ್ಟ್ರೀಯ ಪಕ್ಷಗಳೇ ನೇರ ಕಾರಣ ಎಂದು ಕಿಡಿಕಾರಿದ್ದಾರೆ.
 
ಲೋಕಸಭೆಯ ಸಭಾಪತಿ ಸುಮಿತ್ರಾ ಮಹಾಜನ್ 25 ಕಾಂಗ್ರೆಸ್ ಸಂಸದರನ್ನು ಅಮಾನತ್ತುಗೊಳಿಸಿರುವ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಒಂದು ವೇಳೆ ಸಭಾಪತಿಗಳ ನಿರ್ಧಾರಕ್ಕೆ ಯಾವುದೇ ಪಕ್ಷ ಅಗೌರವ ತೋರಿದಲ್ಲಿ ಪ್ರಜಾಪ್ರಭುತ್ವಕ್ಕೆ ನಾಚಿಕೆ ತರುವ ಸಂಗತಿ. ನಾನು ಯಾವತ್ತೂ ಸಭಾಪತಿಗಳಿಗೆ ಅಗೌರವ ತೋರಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. 
 
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸಂಸತ್ ಕಲಾಪ ಸುಗಮವಾಗಿ ಸಾಗಲು ಅನುಕೂಲ ಮಾಡಿಕೊಡುವುದು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ