ವಾರಣಾಸಿ ದುರಂತ: ಸಾವಿನ ಸಂಖ್ಯೆ 24ಕ್ಕೆ ಏರಿಕೆ

ಭಾನುವಾರ, 16 ಅಕ್ಟೋಬರ್ 2016 (09:58 IST)
ಉತ್ತರಪ್ರದೇಶದ ವಾರಣಾಸಿ ಮತ್ತು ಚಂಡೋಲಿ ಪ್ರದೇಶದ ರಾಜಘಾಟ್‌ ಸೇತುವೆಯಲ್ಲಿ ನಡೆದ ಕಾಲ್ತುಳಿದಲ್ಲಿ ಸಾವನ್ನಪ್ಪಿದವರ ಸಂಖ್ಯೆ 24ಕ್ಕೇರಿದೆ.

ಘಟನೆಯಲ್ಲಿ 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
 
ದೇವಾಲಯಗಳ ನಗರ ವಾರಣಾಸಿಯ ರಾಜಘಾಟ್ ಸೇತುವೆ ಬಳಿ ಬಾಬಾ ಜೈ ಗುರುದೇವ್‌ರ ಧಾರ್ಮಿಕ ಸಮಾರಂಭ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ  ಸುಮಾರು 3000 ಜನರು ಪಾಲ್ಗೊಲ್ಳುವ ನಿರೀಕ್ಷೆ ಇತ್ತು. ಆದರೆ ಬಂದಿದ್ದು ಸುಮಾರು 80,000ಕ್ಕೂ ಹೆಚ್ಚು ಜನ. ಭಕ್ತರ ಮೆರವಣಿಗೆ ಸೇತುವೆ ಮೇಲೆ ಹೋಗುತ್ತಿದ್ದಾಗ ಓರ್ವ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಅಷ್ಟರಲ್ಲಿ ಯಾರೋ ಸೇತುವೆ ಕುಸಿಯುತ್ತಿದೆ ಎಂದು ವದಂತಿ ಹಬ್ಬಿಸಿದ್ದಾರೆ. ಹೀಗಾಗಿ ನೂಕುನುಗ್ಗಲು ಸಂಭವಿಸಿ ಈ ಭೀಕರ ಘಟನೆ ನಡೆದಿದೆ. 
 
ಮಾಹಿತಿ ದೊರೆಯುತ್ತಿದ್ದಂತೆ ರಕ್ಷಣಾ ಕಾರ್ಯ ಆರಂಭಿಸಿದ ಜಿಲ್ಲಾಡಳಿತ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿತು.
 
ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ. ಜತೆಗೆ ಉಚಿತ ಚಿಕಿತ್ಸೆ ನೀಡುವಂತೆ ಆಸ್ಪತ್ರೆಗಳಿಗೆ ನಿರ್ದೇಶನ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ