ದೆಹಲಿ ಪೊಲೀಸ್‌ರನ್ನು ಖಾಸಗಿ ಸೇನೆಯಂತೆ ಬಳಸಿಕೊಳ್ಳುತ್ತಿರುವ ಬಿಜೆಪಿ, ಆರೆಸ್ಸೆಸ್: ಅರವಿಂದ್ ಕೇಜ್ರಿವಾಲ್

ಸೋಮವಾರ, 1 ಫೆಬ್ರವರಿ 2016 (20:12 IST)
ಆರೆಸ್ಸೆಸ್ ಮತ್ತು ಬಿಜೆಪಿ ದೆಹಲಿ ಪೊಲೀಸ್ ಇಲಾಖೆಯನ್ನು ಖಾಸಗಿ ಸೇನೆಯಾಗಿ ಬಳಸಿಕೊಳ್ಳುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
 
ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲು ಆತ್ಮಹತ್ಯೆ ಕುರಿತಂತೆ ಆರೆಸ್ಸೆಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು, ಮಹಿಳೆಯರ ಮೇಲೆ ದೆಹಲಿ ಪೊಲೀಸರು ತೋರಿದ ದೌರ್ಜನ್ಯ ತೀವ್ರ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ಬಿಜೆಪಿ ಮತ್ತು ಆರೆಸ್ಸೆಸ್ ತನ್ನ ವಿರೋಧಿಗಳಿಗೆ ತಕ್ಕ ಪಾಠ ಕಲಿಸಲು ದೆಹಲಿ ಪೊಲೀಸರನ್ನು ಖಾಸಗಿ ಸೇನೆಯಾಗಿ ಬಳಸಿಕೊಳ್ಳುತ್ತಿವೆ. ವಿದ್ಯಾರ್ಥಿಗಳ ಮೇಲೆ ನಡೆದ ದುಷ್ಕ್ರತ್ಯದಿಂದ ತುಂಬಾ ನೋವಾಗಿದೆ ಎಂದು ತಿಳಿಸಿದ್ದಾರೆ. 
 
ಎಫ್‌ಟಿಐಐ, ರೋಹಿತ್ ಪ್ರಕರಣ, ಹೈದ್ರಾಬಾದ್ ವಿಶ್ವವಿದ್ಯಾಲಯ.ಐಐಟಿ ಇದೀಗ ದೆಹಲಿ ವಿದ್ಯಾರ್ಥಿಗಳ ಮೇಲ ನಡೆದ ದಾಳಿ ನೋಡಿದಲ್ಲಿ ಮೋದಿ ಸರಕಾರ ವಿದ್ಯಾರ್ಥಿಗಳ ಮೇಲೆ ಯುದ್ಧ ಸಾರಿದಂತಿದೆ ಎಂದು ಕಿಡಿಕಾರಿದ್ದಾರೆ. 
 
ಆರೆಸ್ಸೆಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು, ಮಹಿಳೆಯರ ಮೇಲೆ ದೆಹಲಿ ಪೊಲೀಸರು ನಡೆಸಿದ ದೌರ್ಜನ್ಯಕ್ಕೆ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.  
 
ವಿಡಿಯೋ ಕ್ಲಿಪ್‌ನಲ್ಲಿ ಪುರುಷ ಪೇದೆಯೊಬ್ಬ ಮಹಿಳಾ ಪ್ರತಿಭಟನಾಕಾರಳ ಕೂದಲು ಹಿಡಿದು ನೆಲಕ್ಕೆ ಅಪ್ಪಳಿಸುವ ದೃಶ್ಯಗಳು ಮನಕಲಕುವಂತಿವೆ. ಯುವಕನೊಬ್ಬನನ್ನು ಸುತ್ತುವರಿದ ಪೊಲೀಸರು ಮನಬಂದಂತೆ ಥಳಿಸುತ್ತಿರುವ ದೃಶ್ಯಗಳು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿವೆ.

ವೆಬ್ದುನಿಯಾವನ್ನು ಓದಿ