ಬಜೆಟ್ : ಮಧ್ಯಮ ವರ್ಗದವರನ್ನು ಓಲೈಕೆಯತ್ತ ಅರುಣ್ ಜೇಟ್ಲಿ ಚಿತ್ತ

ಶನಿವಾರ, 28 ಫೆಬ್ರವರಿ 2015 (10:16 IST)
ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಎನ್‌ಡಿಎ ಸರ್ಕಾರದ ಚೊಚ್ಚಲ ಬಜೆಟ್‌ ಇಂದು ಮಂಡಿಸಲಿದ್ದು, ಇದರಲ್ಲಿ ಜನಸಾಮಾನ್ಯರ ಓಲೈಕೆಯ ಜೊತೆಗೆ ದೇಶವನ್ನು ಹೂಡಿಕೆದಾರರ ಸ್ವರ್ಗವನ್ನಾಗಿಸುವ ಹಲವು ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.














ಅಧಿಕಾರಕ್ಕೆ ಬಂದ ಬಳಿಕ ಸರ್ಕಾರ ಕೇವಲ ಘೋಷಣೆ ಮಾಡುವುದರಲ್ಲೇ ನಿರತವಾಗಿದೆ. ಘೋಷಣೆಯ ಲಾಭ ನೇರವಾಗಿ ಜನರಿಗೆ ತಲುಪಿಲ್ಲ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಜನಸಾಮಾನ್ಯರಿಗೆ ನೇರವಾಗಿ ಲಾಭ ತರುವಂತ ಹಲವು ನಿರ್ಧಾರಗಳನ್ನು ಸಚಿವ ಜೇಟ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಇಂಥ ಓಲೈಕೆ ಕ್ರಮಗಳ ಜೊತೆಗೆ ವಿತ್ತೀಯ ಕೊರತೆ ಕಡಿಮೆ ಮಾಡುವ, ಆರ್ಥಿಕತೆಗೆ ಚೇತರಿಕೆ ನೀಡುವ, ಉದ್ಯಮ ವಲಯಕ್ಕೆ ಟಾನಿಕ್‌ ನೀಡುವ ಸಂಕಷ್ಟದ ಸ್ಥಿತಿಯಲ್ಲಿ ಸಚಿವ ಜೇಟ್ಲಿ ಇದ್ದಾರೆ.
 
ಮುಖ್ಯವಾಗಿ, ಆರ್ಥಿಕ ಸುಧಾರಣೆಯ ಹಾದಿಯಲ್ಲಿ ತೆರಿಗೆ ಪದ್ಧತಿ, ಸಬ್ಸಿಡಿ ನೀತಿಯಲ್ಲಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಚಿಂತಿಸಿದ್ದ ಬಿಜೆಪಿಗೆ ದೆಹಲಿ ವಿಧಾನಸಭಾ ಚುನಾವಣೆ ಭರ್ಜರಿ ಶಾಕ್‌ ನೀಡಿದೆ. ಹೀಗಾಗಿ ಮಧ್ಯಮ ವರ್ಗದವರು ಮತ್ತು ಬಡವರ ಕಡೆಗೆ ಕನಿಷ್ಠ ಚಿತ್ತ ಹಾಯಿಸುವ ಸ್ಥಿತಿಯಲ್ಲಿ ಕಮಲದ ಪಕ್ಷವಿಲ್ಲ. ಅದೀಗ ಅನಿವಾರ್ಯವಾಗಿ ಅದು ಮತ್ತೂಂದು ಸುತ್ತಿನಲ್ಲಿ ಮಧ್ಯಮ ವರ್ಗದವರನ್ನು ಓಲೈಕೆ ಮಾಡಲೇಬೇಕಿದೆ. ಕಾರಣ, ವರ್ಷಾಂತ್ಯಕ್ಕೆ ಬಿಹಾರದಲ್ಲಿ ಮತ್ತು ಮುಂದಿನ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ಇತರೆ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿಕ್ಕಿದೆ. ಪರಿಣಾಮ ಬಜೆಟ್‌ ಕೇವಲ ಹಣಕಾಸಿನ ಲೆಕ್ಕಾಚಾರವನ್ನು ಮಾತ್ರವಲ್ಲದೇ, ರಾಜಕೀಯ ಲೆಕ್ಕಾಚಾರವನ್ನು ಒಳಗೊಂಡಿರುವುದು ಸ್ಪಷ್ಟ.
 
ತೆರಿಗೆ ವಿನಾಯಿತಿ: 
 
ಕಳೆದ ಮಧ್ಯಂತರ ಬಜೆಟ್‌ನಲ್ಲಿ ಸಚಿವ ಜೇಟ್ಲಿ, ಆದಾಯ ತೆರಿಗೆ ಮಿತಿ ಮತ್ತು ಉಳಿತಾಯದ ಮೇಲಿನ ತೆರಿಗೆ ವಿನಾಯಿತಿ ಎರಡಲ್ಲೂ ಬದಲಾವಣೆ ಮಾಡಿ, ಜನಸಾಮಾನ್ಯರನ್ನು ಮೆಚ್ಚಿಸಿದ್ದರು. ಆದರೆ ಈ ಬಾರಿ ಆದಾಯ ಸಂಗ್ರಹ ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಕಾರಣ, ಮೇಲ್ಕಂಡ ಎರಡು ವಿಷಯಗಳ ಪೈಕಿ ಒಂದಕ್ಕೆ ಮತ್ತಷ್ಟು ವಿನಾಯಿತಿ ನೀಡುವ ಸಾಧ್ಯತೆ ಇದೆ.
 
ವಿತ್ತೀಯ ಶಿಸ್ತು:  
 
ಹಾಲಿ ಜಿಡಿಪಿಯ ಶೇ.4.1ರಷ್ಟಿರುವ ವಿತ್ತೀಯ ಕೊರತೆಯನ್ನು ಶೇ.3.6ಕ್ಕೆ ಇಳಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಇದಕ್ಕಾಗಿ ಸಬ್ಸಿಡಿ ಹೊರೆ ತಪ್ಪಿಸಿಕೊಳ್ಳುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿದೆ. ಇಂಥ ವಿತ್ತೀಯ ಶಿಸ್ತು ಸಾಧ್ಯವಾಗದೇ ಹೋದಲ್ಲಿ, ಮುಂಬರುವ ವರ್ಷಗಳಲ್ಲಿ ಸರ್ಕಾರ ಸಂಕಷ್ಟಕ್ಕೆ ಸಿಕ್ಕಿಬೀಳುವ ಸಾಧ್ಯತೆ ಇದೆ. ಆದರೆ ಇಂಥ ಶಿಸ್ತಿನ ಕ್ರಮಗಳು ಜನಪ್ರಿಯ ಯೋಜನೆಗಳಿಗೆ ನೀಡುವ ಅನುದಾನದ ಕಡಿತಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ಜೇಟಿÉ ಅನುಸರಿಸುವ ತಂತ್ರ ಏನಿರಬಹುದು ಎಂಬ ಕುತೂಹಲವಿದೆ.
 
"ಮೇಕ್‌ ಇನ್‌ ಇಂಡಿಯಾ' ಆರ್ಥಿಕತೆಗೆ ಟಾನಿಕ್‌: 
 
ಆರ್ಥಿಕತೆ ಪ್ರಗತಿ ಸಾಧಿಸದ ಹೊರತೂ, ದೇಶದ ಪ್ರಗತಿ ಸಾಧ್ಯವಿಲ್ಲ. ಹೀಗಾಗಿಯೇ ಕುಂಠಿತೊಂಡಿರುವ ಉದ್ಯಮ ವಲಯಕ್ಕೆ ಟಾನಿಕ್‌ ನೀಡುವ ಕೆಲಸವನ್ನು ಜೇಟ್ಲಿ ಮಾಡುವ ಸಾಧ್ಯತೆ ಇದೆ. ಅದರಲ್ಲೂ ಮೋದಿ ಕನಸಿನ ಮೇಕ್‌ ಇನ್‌ ಇಂಡಿಯಾ ಯೋಜನೆಗೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ಸಿಗುವ ನಿರೀಕ್ಷೆ ಇದೆ. ಇನ್ನು ಮೇಕ್‌ ಇನ್‌ ಇಂಡಿಯಾ ಯಶಸ್ವಿಯಾಗಲು, ವಿದೇಶಿ ಹೂಡಿಕೆದಾರರು ಬಯಸುವ ವಾತಾವರಣ ಅಗತ್ಯ. ಈ ನಿಟ್ಟಿನಲ್ಲಿ ಹಲವು ಪೂರಕ ಕ್ರಮಗಳು ಘೋಷಣೆಯಾಗುವ ನಿರೀಕ್ಷೆ ಉಂಟು.
 
ತೆರಿಗೆ ವ್ಯವಸ್ಥೆ:  
 
ದೇಶದ ತೆರಿಗೆ ವ್ಯವಸ್ಥೆಯ ಬಗ್ಗೆ ವಿದೇಶಿ ಹೂಡಿಕೆದಾರರು ಹಿಂದಿನಿಂದಲೂ ದೂರು ವ್ಯಕ್ತಪಡಿಸುತ್ತಲೇ ಇದ್ದಾರೆ. ಹೀಗಾಗಿ ಸರಳ, ಪಾರದರ್ಶಕ ಮತ್ತು ದೂರದೃಷ್ಟಿಯನ್ನೊಳಗೊಂಡ ತೆರಿಗೆ ಪದ್ಧತಿಯ ಕುರಿತು ಬಿಜೆಪಿ ಹಿಂದಿನಿಂದಲೂ ಒಲವು ವ್ಯಕ್ತಪಡಿಸುತ್ತಲೇ ಇತ್ತು. ಹೀಗಾಗಿ ತೆರಿಗೆ ವ್ಯವಸ್ಥೆಯ ಕುರಿತು ಕೇಂದ್ರ ಯಾವ ಹೊಸ ವಿಷಯಗಳನ್ನು ಮಂಡಿಸಬಹುದು ಎಂಬ ನಿರೀಕ್ಷೆಯಲ್ಲಿ ಉದ್ಯಮ ವಲಯ ಇದೆ.
 
ಆರ್ಥಿಕ ಸಮೀಕ್ಷೆಯ ಸುಳಿವು:  
 
ಶುಕ್ರವಾರ ಕೇಂದ್ರ ಸರ್ಕಾರ ಮಂಡಿಸಿದ ಆರ್ಥಿಕ ಸಮೀಕ್ಷೆಯು, ಸ್ಪರ್ಧಾತ್ಮಕ ವಾತಾವರಣ ನಿರ್ಮಾಣ, ಊಹಿಸಬಹುದಾದ ಸ್ಥಿತಿಗತಿ, ಸರಳ ತೆರಿಗೆ ಪದ್ಧತಿ, ಉಳಿತಾಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಸುಳಿವು ನೀಡಿವೆ. ಅಂದರೆ ಸುಧಾರಣ ಬಜೆಟ್‌ ಇದಾಗಿರಲಿದೆ ಎಂಬ ಸಂದೇಶವನ್ನು ರವಾನಿಸಿದೆ. ಜೊತೆಗೆ ಗುರುವಾರ ಮಂಡಿಸಲಾದ ರೈಲ್ವೆ ಬಜೆಟ್‌ನಲ್ಲಿ, ಹೊಸ ಯೋಜನೆ ಘೋಷಿಸುವುದಕ್ಕೆ ಬದಲಾಗಿ, ಈಗಾಗಲೇ ಘೋಷಿಸಿರುವ ಯೋಜನೆಗಳ ಜಾರಿ, ಸಂಪನ್ಮೂಲ ಸಂಗ್ರಹಣೆಗೆ, ಭವಿಷ್ಯದ ಕಡೆ ಹೆಚ್ಚಿನ ಒತ್ತು ನೀಡಿದ್ದು ಕಂಡುಬಂದಿತ್ತು. ಹೀಗಾಗಿಯೇ ಜೇಟ್ಲಿ ಮಂಡಿಸುವ ಬಜೆಟ್‌ ಕುರಿತ ನಿರೀಕ್ಷೆಗಳು ಸಹಜವಾಗಿಯೇ ಮತ್ತಷ್ಟು ಹೆಚ್ಚಾಗಿದೆ.
 
- ಇಂದು ಎನ್‌ಡಿಎ ಸರ್ಕಾರದ ಮೊದಲ ಪೂರ್ಣ ಬಜೆಟ್‌
 
- ಕೇಂದ್ರದ ಪಾಲಿಗೆ ಮಾಡು ಇಲ್ಲವೇ ಮಡಿ ಬಜೆಟ್‌
- ಬಜೆಟ್‌ ಮಂಡನೆಗೆ ವಿತ್ತ ಸಚಿವ ಅರುಣ್‌ ಜೇಟ್ಲಿ ಸಜ್ಜು
- ತೆರಿಗೆ ಪದ್ಧತಿಯಲ್ಲಿ ಸುಧಾರಣೆ ಘೋಷಿಸುವ ಸಾಧ್ಯತೆ
- ಮೋದಿ ಕನಸಿನ ಮೇಕ್‌ ಇನ್‌ ಇಂಡಿಯಾಕ್ಕೆ ಆದ್ಯತೆ
- ಜನಸಾಮಾನ್ಯರ ಸೆಳೆಯಲು ಹಲವು ಓಲೈಕೆ ಕ್ರಮಗಳು
 
ಬಜೆಟ್‌ನ ಸಂಭಾವ್ಯ "ಟಾಪ್‌ 5 ಹೈಲೈಟ್ಸ್‌' 
 
1. ಆದಾಯ ತೆರಿಗೆ ವಿನಾಯಿತಿ 2.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಳ ಸಂಭವ
2. ಉಳಿತಾಯ ಯೋಜನೆ ಹೂಡಿಕೆ ಮೇಲಿನ ತೆರಿಗೆ ವಿನಾಯಿತಿ ಮಿತಿ ಈಗಿನ 1.5 ಲಕ್ಷ ರೂ.ಗಿಂತ ಹೆಚ್ಚಳ
3. ಪಿಂಚಣಿ ಮತ್ತು ಆರೋಗ್ಯ ವಿಮೆ ಹೂಡಿಕೆಯ ಮೇಲಿನ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ
4. "ಮೇಕ್‌ ಇನ್‌ ಇಂಡಿಯಾ' ಯಶಸ್ವಿಯಾಗಲು ಉದ್ಯಮಿಗಳಿಗೆ ಹಲ ರಿಯಾಯ್ತಿ ಘೋಷಣೆ
5. ಶೇ.4.1ರಷ್ಟಿರುವ ವಿತ್ತೀಯ ಕೊರತೆಯನ್ನು ಶೇ.3.6ಕ್ಕೆ ಇಳಿಸುವ ಗುರಿ
 

ವೆಬ್ದುನಿಯಾವನ್ನು ಓದಿ