ಕೊನೆಯುಸಿರೆಳೆದ ಮ್ಯಾಂಡೋಲಿನ್‌ ಶ್ರೀನಿವಾಸ್‌

ಶುಕ್ರವಾರ, 19 ಸೆಪ್ಟಂಬರ್ 2014 (17:07 IST)
ಮ್ಯಾಂಡೋಲಿನ್ ಶ್ರೀನಿವಾಸ್  ಎಂದೇ ವಿಶ್ವದಾದ್ಯಂತ ಪ್ರಸಿದ್ಧರಾಗಿರುವ ಮಹಾನ್‌  ಮ್ಯಾಂಡೊಲಿನ್‌ ವಾದಕ, ಸಂಗೀತಗಾರ ಯು.ಶ್ರೀನಿವಾಸ್‌ ಶುಕ್ರವಾರ ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 45 ವರ್ಷ ವಯಸ್ಸಾಗಿತ್ತು. 

ಲಿವರ್ ಸಮಸ್ಯೆಯಿಂದಾಗಿ ಕೆಲ ದಿನಗಳ ಹಿಂದೆ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀನಿವಾಸ್‌, ಶುಕ್ರವಾರ ಬೆಳಗ್ಗೆ ಸುಮಾರು 9.30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಆಂಧ್ರಪ್ರದೇಶದ ಪಲಕೊಲು ಎಂಬಲ್ಲಿ 1969ರ ಫೆಬ್ರವರಿ 29ರಂದು ಜನಿಸಿದ್ದ  ಶ್ರೀನಿವಾಸ್‌ 6 ರ ಪ್ರಾಯದಲ್ಲೇ ಮ್ಯಾಂಡೋಲಿನ್‌ ನುಡಿಸುವಲ್ಲಿ ಪರಿಣತಿ ಸಾಧಿಸಿದ್ದರು. 9 ರ ಪ್ರಾಯದಲ್ಲೇ ಮೊದಲ ಸಾರ್ವಜನಿಕ ಸಂಗೀತ ಕಚೇರಿ ನಡೆಸಿ ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಅವರು ನೋಡ ನೋಡುತ್ತಿದ್ದಂತೆಯೇ ಮ್ಯಾಂಡೋಲಿನ್‌ ಕ್ಷೇತ್ರದ ಉಜ್ವಲ ತಾರೆಯಾಗಿ ಬೆಳೆದು ನಿಂತರು.  
 
ಜಾಗತಿಕ ಸಂಗೀತಗಾರರಾದ ಜಾನ್ ಮೆಕ್ಲಾಗ್ಲಿನ್, ಮೈಕೆಲ್ ನೈಮನ್ ಮತ್ತು ಮೈಕೆಲ್ ಬ್ರೂಕ್‌ರಂಥ ಘಟಾನುಘಟಿಗಳ ಮೆಚ್ಚುಗೆ ಗಳಿಸಿದ್ದ ಶ್ರೀನಿವಾಸ್‌, ಸಣ್ಣ ವಯಸ್ಸಲ್ಲೇ ಪದ್ಮಶ್ರೀ(1998) ಹಾಗೂ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ(2010)  ಪಡೆದಿದ್ದರು.  
 
ಪ್ರತಿಷ್ಠಿತ ಸಂಗೀತಾ ರತ್ನ ಪ್ರಶಸ್ತಿಯಿಂದಲೂ ಅವರು ಪುರಸ್ಕೃತರಾಗಿದ್ದಾರೆ.
 
ಅವರು ತಮ್ಮ ತಂದೆ ಹಾಗೂ ಸೋದರ (ಪ್ರಖ್ಯಾತ ಮಾಂಡೋಲಿನ್ ವಾದಕ) ಮ್ಯಾಂಡೊಲಿನ್‌ ಯು.ರಾಜೇಶ್‌ರನ್ನು ಶ್ರೀನಿವಾಸ್‌ ಅಗಲಿದ್ದಾರೆ.

ವೆಬ್ದುನಿಯಾವನ್ನು ಓದಿ