ಕುಡುಕ ಪೊಲೀಸಪ್ಪನ ಅಮಲಿನಾಟ; ಪ್ರಯಾಣಿಕರಿಗೆ ಕಿರಿಕ್

ಭಾನುವಾರ, 23 ಆಗಸ್ಟ್ 2015 (12:39 IST)
ಸಾರ್ವಜನಿಕ ಸ್ಥಳದಲ್ಲಿ ಕಿರಿಕ್ ಮಾಡುವವರನ್ನು ಪೊಲೀಸರು ವಿಚಾರಿಸಿಕೊಳ್ಳುವುದು ಸಹಜ. ಆದರೆ ಸಾರ್ವಜನಿಕ ಶಾಂತಿಯನ್ನು ಕಾಪಾಡಬೇಕಾದ ಪೊಲೀಸ್ ಸ್ವತಃ ಸಾರ್ವಜನಿಕರಿಗೆ ತೊಂದರೆ ನೀಡಿದರೆ? ಹೌದು ದೆಹಲಿ ಮೆಟ್ರೋದಲ್ಲಿ ಈ ರೀತಿಯ ಘಟನೆ ನಡೆದಿದೆ.
 
ದೆಹಲಿಯ ಪೊಲೀಸ್ ಪೇದೆಯೊಬ್ಬರು ಕಂಠಪೂರ್ತಿ ಕುಡಿದು ಬಂದು ಮೆಟ್ರೋದಲ್ಲಿದ್ದ ಪ್ರಯಾಣಿಕರಿಗೆ ಪುಕ್ಸಟೆ ಮನೋರಂಜನೆ ನೀಡಿದ್ದಾರೆ. ಕುಡಿದ ಅಮಲಿನಲ್ಲಿದ್ದ ಪೊಲೀಸ್ ಪೇದೆ ಮೆಟ್ರೋ ಹತ್ತಿ ತೂರಾಡಲು ಆರಂಭಿಸಿದ್ದಾರೆ. ಕಂಠಪೂರ್ತಿ ಕುಡಿದಿದ್ದ ಅವರಿಗೆ ಬಾಹ್ಯಪ್ರಜ್ಞೆಯೇ ಇರಲಿಲ್ಲ. ಇದರಿಂದ ಸಹ ಪ್ರಯಾಣಿಕರಿಗೆ ಮನರಂಜನೆ ಸಿಕ್ಕಿತಾದರೂ ಆತನ ಅಸಭ್ಯ ವರ್ತನೆ ಅತಿಯಾದಾಗ ಕಿರಿಕ್ ಎನ್ನಿಸತೊಡಗಿದೆ.
 
ಎಲ್ಲಿ ಡೋರ್ ಇದೆ ಎನ್ನುವುದೇ ಅವರಿಗೆ ಗೊತ್ತಾಗಿಲ್ಲ. ಸಹ ಪ್ರಯಾಣಿಕರು ಡೋರ್ ತೋರಿಸಿದಾಗ ಅತ್ತಕಡೆ ಹೋಗಿ ಅಲ್ಲೇ ಬಿದ್ದಿದ್ದಾರೆ.
 
ಅವರ ಅಮಲಿನಾಟದ ದೃಶ್ಯಾವಳಿಗಳನ್ನು ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಓಡಾಡುತ್ತಿದೆ.
 
ತಮ್ಮ ಸಿಬ್ಬಂದಿಯ ದುರ್ವತನೆಯನ್ನು ನೋಡಿ ಇರಿಸುಮುರಿಸು ಪಟ್ಟುಕೊಂಡಿರುವ ದೆಹಲಿ ಪೊಲೀಸ್ ಆತನ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ.
 
ದೆಹಲಿ ಮೆಟ್ರೋನಲ್ಲಿ ಕುಡಿದುಕೊಂಡು ಬರುವವರಿಗೆ ಪ್ರವೇಶ ನೀಡಲಾಗುವುದಿಲ್ಲ. ಆದರೆ ಆತನನ್ನು ಹೇಗೆ ಒಳ ಬಿಡಲಾಯಿತು ಎಂದು ಮೆಟ್ರೋ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಮುಂದೆ ಇಂತಹ ಘಟನೆಗಳು ನಡೆಯದಿರುವಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ