ಉತ್ತರಪ್ರದೇಶದ ಮಹಿಳಾ ಕಾಲೇಜುಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಆದೇಶ

ಗುರುವಾರ, 21 ಆಗಸ್ಟ್ 2014 (17:23 IST)
ರಾಜ್ಯದ ಎಲ್ಲ ಮಹಿಳಾ ಕಾಲೇಜು ಮತ್ತು ವಸತಿ ನಿಲಯಗಳ ಪ್ರವೇಶ ದ್ವಾರದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವಂತೆ ಉತ್ತರ ಪ್ರದೇಶ ಸರಕಾರ ಆದೇಶ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

ಮುಖ್ಯ ಕಾರ್ಯದರ್ಶಿ ಅಲೋಕ್ ರಂಜನ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಿ ಚರ್ಚೆಗಳನ್ನು ನಡೆಸಿದ ತರುವಾಯ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. 
 
"ಹೆಚ್ಚುತ್ತಿರುವ ಲೈಂಗಿಕ ಹಲ್ಲೆ ಮತ್ತು ಶೋಷಣೆ ಘಟನೆಗಳ ಕುರಿತು ರಾಜ್ಯ ಸರ್ಕಾರ ಚಿಂತೆಗೀಡಾಗಿದ್ದು, ಹೀಗಾಗಿ ಈ ಕ್ರಮವನ್ನು ತೆಗೆದುಕೊಂಡಿದೆ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
 
ಎಲ್ಲಾ ಮಹಿಳಾ ಕಾಲೇಜುಗಳ ಪ್ರವೇಶ ದ್ವಾರ, ಕಾಲೇಜು ಆವರಣ ಮತ್ತು ವಸತಿ ನಿಲಯದ ಗೇಟುಗಳಲ್ಲಿ ಭದ್ರತಾ ಕಾರಣಗಳಿಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಪ್ರಧಾನ ಕಾರ್ಯದರ್ಶಿ (ಗೃಹ ಇಲಾಖೆ) ನೀರಜ್ ಗುಪ್ತಾ ಬುಧವಾರ ರಾತ್ರಿ ಆದೇಶ ಹೊರಡಿಸಿದ್ದಾರೆ. 
 
ಈ ಆದೇಶ ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಮತ್ತು ಖಾಸಗಿ ಕಾಲೇಜುಗಳಿಗೆ ಅನ್ವಯಿಸುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. 
 
ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಒಂದು ತಿಂಗಳ ಸಮಯಾವಕಾಶವನ್ನು ನೀಡಲಾಗಿದೆ. ಪ್ರತಿದಿನವೂ ವಿಡಿಯೋವನ್ನು ನೋಡುವಂತೆ ಮತ್ತು ಒಂದು ವೇಳೆ ಏನಾದರೂ ಸಮಸ್ಯೆ ಕಂಡು ಬಂದರೆ ಪೋಲಿಸರಿಗೆ ತಿಳಿಸಲು ಸೂಚಿಸಲಾಗಿದೆ.

ವೆಬ್ದುನಿಯಾವನ್ನು ಓದಿ