ಗಾಂಧಿ, ಪಟೇಲ್ ಬಿಟ್ರೆ ಬೇರೆಯವರ ಜನ್ಮದಿನಾಚರಣೆಗೆ ಕೇಂದ್ರ ಸರ್ಕಾರ ನಕಾರ

ಶುಕ್ರವಾರ, 24 ಅಕ್ಟೋಬರ್ 2014 (16:17 IST)
ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದ ನಂತರ ಬದಲಾದ ಕಾಲದ ಲಕ್ಷಣವನ್ನು ತೋರಿಸಿದ್ದು, ಮಹಾತ್ಮ ಗಾಂಧಿ ಮತ್ತು ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜನ್ಮದಿನೋತ್ಸವವನ್ನು ಬಿಟ್ಟರೆ ಬೇರಾರದ್ದೇ ಜನ್ಮದಿನೋತ್ಸವಗಳನ್ನು, ಪುಣ್ಯತಿಥಿಗಳನ್ನು  ನಡೆಸದಿರಲು ಕೇಂದ್ರಸರ್ಕಾರ ನಿರ್ಧರಿಸಿದೆ.

ಸರ್ಕಾರ ಸರ್ದಾರ್ ಪಟೇಲ್  ಅವರ ಜನ್ಮದಿನೋತ್ಸವವನ್ನು ಅಕ್ಟೋಬರ್ 31ರಂದು ಆಚರಿಸುತ್ತಿದ್ದು, ಅದನ್ನು ರಾಷ್ಟ್ರೀಯ ಏಕತೆ ದಿನವೆಂದು ಕರೆದಿದೆ. ಆದರೆ ಅಕ್ಟೋಬರ್ 31ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿಯಾಗಿದ್ದು, ಯುಪಿಎ ಸರ್ಕಾರ ಇಂದಿರಾ ಗಾಂಧಿ ಸಮಾಧಿಗೆ ತೆರಳಿ ಗೌರವ ಸಲ್ಲಿಸುವ ವಾಡಿಕೆಯನ್ನು ಇಟ್ಟುಕೊಂಡಿತ್ತು. ಆದರೆ ಇಂದಿರಾ ಗಾಂಧಿ ಪುಣ್ಯತಿಥಿಯಂದು ಇಂದಿರಾಗಾಂಧಿಯವರಿಗೆ ಗೌರವ ಸಲ್ಲಿಸುವ ಬಗ್ಗೆ ಸರ್ಕಾರ ತುಟಿಬಿಚ್ಚಿಲ್ಲ.

ಪಟೇಲ್ ಜನ್ಮದಿನಾಚರಣೆಯಿಂದ ರಾಷ್ಟ್ರವನ್ನು ಏಕತೆಯಿಂದ ಇಡುವ ನಾಯಕನ ನಿರ್ಣಾಯಕ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಲು ಸಹಾಯವಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಕ್ಟೋಬರ್ 31ನ್ನು ಉತ್ಸವದ ರೀತಿಯಲ್ಲಿ ಆಚರಿಸಲಾಗುತ್ತದೆ. ಶಾಲೆಯ ಇತಿಹಾಸದ ಪಠ್ಯಗಳಲ್ಲಿ ಕೂಡ, ವಲ್ಲಭಾಯಿ ಪಟೇಲ್ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡಿಲ್ಲ ಎಂದು  ನರೇಂದ್ರ ಮೋದಿ ವಿಷಾದಿಸಿದರು. 

ವೆಬ್ದುನಿಯಾವನ್ನು ಓದಿ