ಮೋದಿ ಕೆಂಪುಗೂಟದ ಕಾರು ನಿಷೇಧಿಸಿದ್ಯಾಕೆ ಗೊತ್ತಾ..?

ಬುಧವಾರ, 19 ಏಪ್ರಿಲ್ 2017 (17:25 IST)
ಅತಿ ಗಣ್ಯ ವ್ಯಕ್ತಿಗಳು ಕಾರಿನಲ್ಲಿ ಕೆಂಪು ದೀಪ ಬಳಸುವ ವಿವಿಐಪಿ ಸಂಸ್ಕೃತಿಗೆ ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಫುಲ್ ಸ್ಟಾಪ್ ಇಟ್ಟಿದೆ. ಮೇ 1ರಿಂದ ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಸ್ಪೀಕರ್ ಸೇರಿದಂತೆ ಎಲ್ಲ ಗಣ್ಯ, ಅತಿಗಣ್ಯ ವ್ಯಕ್ತಿಗಳು ಕೆಂಪು ದೀಪ ಬಳಕೆ ರದ್ದು ಮಾಡುವ ನಿರ್ಧಾರವನ್ನ ಕೇಂದ್ರ ಸಂಪುಟ ಸಭೆ ಕೈಗೊಂಡಿದೆ.
 

ವಿವಿಐಪಿ ಮೂಮೆಂಟ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರಿಂದ ವಿವಿಐಪಿಗಳು ಕೆಂಪು ದೀಪ ಬಳಕೆ ಬಗ್ಗೆ ಸೂಕ್ತ ಯೋಜನೆ ರೂಪಿಸುವಂತೆ ಈ ಹಿಂದೆಯೇ ಸುಪ್ರೀಂಕೋರ್ಟ್ ಸೂಚಿಸಿತ್ತು. ಈ ನಿಯಮದನ್ವಯ ಯಾರೊಬ್ಬರೂ ಕೆಂಪುದೀಪದ ಕಾರು ಬಳಸುವಂತಿಲ್ಲ. ಆದರೆ, ಆಂಬುಲೆನ್ಸ್, ಪೊಲೀಸ್, ಸೇನಾ ವಾಹನ ಸೇರಿದಂತೆ ತುರ್ತು ಸೇವೆಗಳಿಗೆ ಮಾತ್ರ ಗ್ರೀನ್ ಲೈಟ್ ಬಳಸಲು ನಿರ್ಧರಿಸಲಾಗಿದೆ.

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಿವಿಐಪಿ ಸಂಸ್ಕೃತಿ ಸರಿಯಲ್ಲ. ಆರೋಗ್ಯಯುತ ಪ್ರಜಾಪ್ರಭುತ್ವ ಮೌಲ್ಯಗಳನ್ನ ಬಲಗೊಳಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಅರುಣ್ ಜೇಟ್ಲಿ ಹೇಳಿದ್ದಾರೆ. ಈ ನಿರ್ಧಾರ ರಾಜ್ಯಗಳಿಗೂ ಅನ್ವಯವಾಗಲಿದೆ.

ಮೋದಿ ಕಣ್ಣು ತೆರೆಸಿತ್ತು ಆ ಘಟನೆ:  ಇತ್ತೀಚೆಗೆ ಮಲೇಶಿಯಾ ಪ್ರಧಾನಿ ನಜೀಬ್ ರಜಾಕ್ ದೆಹಲಿ ಭೇಟಿ ವೇಳೆ ವಿವಿಐಪಿ ಮೂಮೆಂಟ್ ಇದ್ದ ಕಾರಣ ಬಾಲಕನಿಗೆ ರಕ್ತಸ್ರಾವವಾಗುತ್ತಿದ್ದರೂ ಆಂಬ್ಯುಲೆನ್ಸ್ ಒಂದರ ಸಂಚಾರಕ್ಕೆ ಪೊಲೀಸ್ ಅವಕಾಶ ನೀಡಿರಲಿಲ್ಲ. ವಿಡಿಯೊ ಆನ್`ಲೈನ್`ನಲ್ಲಿ ಭಾರಿ ಸುದ್ದಿಮಾಡಿತ್ತು. ವಿವಿಐಪಿ ಮೂಮೆಂಟ್ ಬಗ್ಗೆ ಆಕ್ರೋಶ ಕೇಳಿಬಂದಿತ್ತು.
 
ಅಂದು ಆಂಬ್ಯುಲೆನ್ಸ್ ತೆರಳಲು ಕಾರು ಚಾಲಕರೂ ಪಕ್ಕಕ್ಕೆ ಸರಿದು ಜಾಗ ನೀಡಿದ್ದರು. ಆದರೆ, ಪೊಲೀಸ್ ಮಾತ್ರ ಬ್ಯಾರಿಕೇಡ್ ತೆಗೆಯಲಿಲ್ಲ ಎಂದು ಪ್ರತ್ಯಕ್ಷದರ್ಶಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಪ್ರಧಾನಿ ಮೋದಿ ಗಮನಕ್ಕೂ ಬಂದಿತ್ತು. ಇತ್ತೀಚೆಗೆ ಬಾಂಗ್ಲಾ ಪ್ರಧಾನಿ ಬಂದಾಗಲೂ ಮೋದಿ ಟ್ರಾಫಿಕ್ ನಿಯಂತ್ರಣ ಹೇರದೇ ಟ್ರಾಫಿಕ್`ನಲ್ಲೇ ತೆರಳಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ