ಕೇಂದ್ರದ ಅಧಿಸೂಚನೆ ಬಿಜೆಪಿ ಅಧೈರ್ಯದ ಪ್ರತೀಕ: ಕೇಜ್ರಿವಾಲ್

ಶುಕ್ರವಾರ, 22 ಮೇ 2015 (17:50 IST)
ದೆಹಲಿ ಉಪರಾಜ್ಯಪಾಲರನ್ನು ಬೆಂಬಲಿಸಿ ಅಧಿಸೂಚನೆ ಹೊರಡಿಸಿರುವ ಕೇಂದ್ರದ ಮೇಲೆ ಗರಂ ಆಗಿರುವ ದೆಹಲಿ ಸಿಎಂ ಕೇಜ್ರಿವಾಲ್, ತನ್ನ ಸರ್ಕಾರದ ಭ್ರಷ್ಟಾಚಾರ ವಿರೋಧಿ ಪ್ರಯತ್ನಗಳಿಂದಾಗಿ ಬಿಜೆಪಿ ಭಯಗ್ರಸ್ತವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. 

"ಕೆಲ ತಿಂಗಳುಗಳ ಹಿಂದೆ ಬಿಜೆಪಿ ದೆಹಲಿ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದೆ. ಈಗ ಎಲ್‌ಜಿ ಅವರನ್ನು ಬೆಂಬಲಿಸಿ ಕೇಂದ್ರ ಅಧಿಸೂಚನೆ ಹೊರಡಿಸಿರುವುದು, ಬಿಜೆಪಿ ನಮ್ಮ ಭೃಷ್ಟಾಚಾರ ವಿರೋಧಿ ಕ್ರಮಗಳಿಂದ ಅಳುಕುತ್ತಿದೆ ಎಂಬುದರ ಪ್ರತೀಕವೆನಿಸಿದೆ. ಇಂದು ಮತ್ತೆ ಬಿಜೆಪಿ ಸೋಲನ್ನುಂಡಿದೆ", ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. 
 
ಉನ್ನತ ಅಧಿಕಾರಿಗಳ ನೇಮಕ ಮಾಡುವ ಮತ್ತು ಅವರನ್ನು ವರ್ಗಾವಣೆ ಮಾಡುವ ಅಧಿಕಾರ ಲೆಫ್ಟಿನೆಂಟ್‌ ಗವರ್ನರ್‌ಗೆ ಇದೆ ಎಂದು ಗೃಹ ಇಲಾಖೆ ಪ್ರಕಟಣೆ ಹೊರಡಿಸಿದೆ.
 
ದೆಹಲಿ ಮುಖ್ಯಮಂತ್ರಿ ಮತ್ತು ಲಿಫ್ಟಿನೆಂಟ್ ಗವರ್ನರ್ ನಡುವೆ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ, ಜಂಗ್ ಅವರ ಬೆಂಬಲಕ್ಕೆ ನಿಂತಿದ್ದು,  ಉನ್ನತಾಧಿಕಾರಿಗಳನ್ನು ನೇಮಕ ಮಾಡುವಾಗ ಉಪ ರಾಜ್ಯಪಾಲರು ಮುಖ್ಯಮಂತ್ರಿಗಳ ಜತೆ ಚರ್ಚಿಸುವುದು ಕಡ್ಡಾಯವಲ್ಲ ಎಂದು ಅಧಿಸೂಚನೆಯಲ್ಲಿ ಹೇಳಿದೆ. 
 
ಸಾರ್ವಜನಿಕ ದೃಷ್ಟಿ, ಪೊಲೀಸ್, ಭೂಮಿಗೆ ಸಂಬಂಧಿಸಿದಂತಹ ವಿಚಾರಗಳಲ್ಲಿ ಎಲ್‌ಜಿ  ಸ್ವಂತ "ವಿವೇಚನೆ" ಬಳಸಿಕೊಂಡು ನಿರ್ಧಾರಕ್ಕೆ ಬರಬಹುದು. ಅಗತ್ಯವಿದ್ದಲ್ಲಿ ಮಾತ್ರ ಸಿಎಂ ಬಳಿ ಸಮಾಲೋಚಿಸಬಹುದೆಂದು ಈ ಪ್ರಕಟಣೆಯಲ್ಲಿ ಹೇಳಲಾಗಿದೆ. 

ವೆಬ್ದುನಿಯಾವನ್ನು ಓದಿ