2ಜಿ ಹಗರಣ: ಎ.ರಾಜಾ, ಕನ್ನಿಮೋಳಿ ವಿರುದ್ಧ ವಿಶೇಷ ಕೋರ್ಟ್ ದೋಷಾರೋಪ

ಶುಕ್ರವಾರ, 31 ಅಕ್ಟೋಬರ್ 2014 (11:57 IST)
ಮಾಜಿ ಟೆಲಿಕಾಂ ಸಚಿವ ಎ.ರಾಜಾ, ಡಿಎಂಕೆ ಎಂಪಿ ಕನ್ನಿಮೋಳಿ, ಕರುಣಾನಿಧಿ ಪತ್ನಿ ದಯಾಳು ಅಮ್ಮಲ್ ಮತ್ತಿತರರ ವಿರುದ್ಧ 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಕೋರ್ಟ್ ದೋಷಾರೋಪ ಹೊರಿಸಿದೆ. ಜಾರಿ ನಿರ್ದೇಶನಾಲಯವು 10 ವ್ಯಕ್ತಿಗಳು ಮತ್ತು 9 ಕಂಪನಿಗಳು ಸೇರಿದಂತೆ 19 ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಿತ್ತು.
 
ಜಾರಿ ನಿರ್ದೇಶನಾಲಯ ತನ್ನ ಆರೋಪಪಟ್ಟಿಯಲ್ಲಿ ಆರೋಪಿಗಳು 200 ಕೋಟಿ ರೂ. ಹಣಕಾಸು ಅವ್ಯವಹಾರದಲ್ಲಿ ಭಾಗಿಯಾಗಿದ್ದು, ಹಣದ ವಹಿವಾಟು ನೈಜತೆಯಿಂದ ಕೂಡಿಲ್ಲ.  ಡಿಬಿ ಗ್ರೂಪ್ ಕಂಪೆನಿಗಳಿಗೆ ರಾಜಾ ಅವರು ಟೆಲಿಕಾಂ ಪರವಾನಗಿ ನೀಡಿದ್ದಕ್ಕಾಗಿ ಕೊಟ್ಟ ಲಂಚದ ಹಣವಾಗಿತ್ತು ಎಂದು ಆರೋಪಿಸಿದೆ. 
 
ಡಿಬಿ ಗ್ರೂಪ್ ಕಂಪನಿಯಿಂದ ಡಿಎಂಕೆ ಸಾರಥ್ಯದ ಕಲೈಗ್‌ನಾರ್ ಟಿವಿಗೆ ಕುಸೇಗಾಂವ್ ಫ್ರೂಟ್ಸ್ ಮತ್ತು ವೆಜಿಟೇಬಲ್ಸ್ ಪ್ರೈ. ಲಿ. ಮತ್ತು ಸಿನೆಯುಗ್ ಫಿಲ್ಮ್ಸ್ ಲಿ. ಮೂಲಕ 200 ಕೋಟಿ ರೂ. ವರ್ಗಾವಣೆಗೆ ಸಂಬಂಧಿಸಿದ ವಹಿವಾಟುಗಳ ಸರಣಿ ನೈಜವಾದ ವ್ಯವಹಾರದ ವಹಿವಾಟು ಆಗಿರಲಿಲ್ಲ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
 
ಆದರೆ ಆರೋಪಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯದ ಆರೋಪಗಳಿಗೆ ಪೂರಕವಾದ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ.
 
  2ಜಿ ತರಂಗಾಂತರ ಹಗರಣ ದೇಶದಲ್ಲೇ ಸಂಚಲನ ಮೂಡಿಸಿದ್ದು, ಯುಪಿಎ ಸರ್ಕಾರಕ್ಕೆ ದೊಡ್ಡ ಆಘಾತ ನೀಡಿತ್ತು. ಎ.ರಾಜಾ ಮತ್ತು ಕನ್ನಿಮೋಳಿ ತಪ್ಪಿತಸ್ಥರೆಂದು ಸಾಬೀತಾದರೆ 3ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. 

ವೆಬ್ದುನಿಯಾವನ್ನು ಓದಿ