ವಿದ್ಯಾರ್ಥಿಯ ಕೆನ್ನೆ ಚಿವುಟಿದ ಶಿಕ್ಷಕಿಗೆ 50,000 ರೂಪಾಯಿ ದಂಡ !

ಶುಕ್ರವಾರ, 31 ಅಕ್ಟೋಬರ್ 2014 (17:26 IST)
ಇದು ಬಹಳ ದುಬಾರಿ ಪಿಂಚ್. ಚೆನ್ನೈನ ಶಾಲೆಯೊಂದರ ಶಿಕ್ಷಕಿ ವಿದ್ಯಾರ್ಥಿಯೊಬ್ಬನಿಗೆ ಹಿಂದಿ ಭಾಷಾ ಹೋಮವರ್ಕ್ ಮಾಡದೇ ಇರುವ ಕಾರಣಕ್ಕೆ ಕೆನ್ನೆಯನ್ನು ಬಲವಾಗಿ ಚಿವುಟಿದಳು. ಪರಿಣಾಮ ಆತನ ಕೆನ್ನೆಗೆ ಗಾಯವಾಗಿ ರಕ್ತ ಬಂತು. ಪರಿಣಾಮ ಪೀಡಿತನಿಗೆ 50,000 ಪರಿಹಾರ ಧನವನ್ನು ನೀಡುವಂತೆ ಶಿಕ್ಷಕಿಗೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. 


 
ಇಲ್ಲಿನ ಕೇಸರಿ ಹೈಯರ್ ಸೆಕಂಡರಿ ಶಾಲೆ ಮೈಲಾಪುರದಲ್ಲಿ 2007ರಲ್ಲಿ ನಡೆದ ಘಟನೆಯಲ್ಲಿ ಹಿಂದಿ ಶಿಕ್ಷಕಿ ರಮಾಗೌರಿ,  ವಿದ್ಯಾರ್ಥಿ ಆರಿಫ್ ಇಕ್ಬಾಲ್ ಎಂಬಾತನ  ಕೆನ್ನೆಯನ್ನು ಚಿವುಟಿದ್ದರು. ಪರಿಣಾಮ ಆತನ ಕೆನ್ನೆಗೆ ಗಾಯವಾಗಿತ್ತು . ಈ ಸಂಬಂಧ ಹುಡುಗನ ತಾಯಿ ಮೆಹರುನ್ನೀಸಾ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ಅದೇ ಸಮಯದಲ್ಲಿ ಚೆನ್ನೈನ ಒಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಶಿಕ್ಷಕಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಯಿತು.  ಇದರಿಂದ ಕೋಪಗೊಂಡ ಶಾಲೆ ಸೇಡಿನ ರೂಪದಲ್ಲಿ ಹುಡುಗನನ್ನು ಅನುತ್ತೀರ್ಣಗೊಳಿಸಿ, ಅದೇ ತರಗತಿಯಲ್ಲಿ ಪುನಃ ಓದುವಂತೆ ಮಾಡಿತು. ಘಟನೆ ನಂತರ ಹುಡುಗನ ತಂದೆ ಶಾಲೆಯಿಂದ ವರ್ಗಾವಣೆ ಪತ್ರ ಕೋರಿದ್ದರು. ಆದರೆ, ವರ್ಗಾವಣೆ ಪತ್ರ ನೀಡಲು ಶಾಲೆಯ ಆಡಳಿತ ಮಂಡಳಿ ಸಾಕಷ್ಟು ಸತಾಯಿಸಿತ್ತು.
 
ಘಟನೆ ನಡೆದ ಶಾಲೆ ಸರಕಾರಿ ಶಾಲೆಯಲ್ಲ ಮತ್ತು ಸರಕಾರದಿಂದ ಅನುದಾನ ಪಡೆಯುವ ಶಾಲೆಯೂ ಅಲ್ಲವೆಂಬ ಕಾರಣಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗ ಪ್ರಾರಂಭದಲ್ಲಿ , ಪೀಡಿತನ ತಾಯಿ ನೀಡಿದ ದೂರನ್ನು ಸ್ವೀಕರಿಸಲು ನಿರಾಕರಿಸಿತ್ತು. ಹಾಗಾಗಿ ಅಸಮಾಧಾನಗೊಂಡಿದ್ದ ತಾಯಿ ಈ ವಿಷಯವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರನ್ನು ಸ್ವೀಕರಿಸಲು ಸೂಚಿಸಿತು. ಬಾಲಕನ ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂಬ ತೀರ್ಮಾನಕ್ಕೆ ಬಂದ ಆಯೋಗ 1,000 ರೂಪಾಯಿ  ಪರಿಹಾರ ಧನವನ್ನು ನೀಡುವಂತೆ ಶಿಕ್ಷಕಿಗೆ ಹೇಳಿತ್ತು.
 
ಆದರೆ ಈ ಕುರಿತು ಪೀಡಿತನ ತಾಯಿ ಮತ್ತೆ  ಹೈಕೋರ್ಟ್ ಮೆಟ್ಟಿಲೇರಿದರು. ಪ್ರಕರಣವನ್ನು ದೀರ್ಘವಾಗಿ ವಿಚಾರಣೆಗೆ ಒಳಪಡಿಸಿದ ಕೋರ್ಟ್ ಪೀಡಿತನಿಗೆ 50,000 ಪರಿಹಾರ ಧನವನ್ನು ನೀಡುವಂತೆ ಶಿಕ್ಷಕಿಗೆ ಆದೇಶ ನೀಡಿದೆ. 

ವೆಬ್ದುನಿಯಾವನ್ನು ಓದಿ