ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ಛೋಟಾ ರಾಜನ್‌ ವಿರುದ್ಧ ಆರೋಪ ಪಟ್ಟಿ ದಾಖಲು

ಮಂಗಳವಾರ, 2 ಫೆಬ್ರವರಿ 2016 (19:40 IST)
ಆಸ್ಟ್ರೇಲಿಯಾ ದೇಶಕ್ಕೆ ಪರಾರಿಯಾಗಲು ನಕಲಿ ಪಾಸ್‌ಪೋರ್ಟ್ ಸಿದ್ದಪಡಿಸಿದ ಬೆಂಗಳೂರು ಪಾಸ್‌ಪೋರ್ಟ್ ಕಚೇರಿಯ ಮೂವರು ಮಾಜಿ ಉದ್ಯೋಗಿಗಳು ಮತ್ತು ಛೋಟಾ ರಾಜನ್ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಿಸಲಾಗಿದೆ.
 
ಪಟಿಯಾಲಾ ಹೌಸ್‌ನಲ್ಲಿರುವ ವಿಶೇಷ ನ್ಯಾಯಾಲಯದಲ್ಲಿ ಭೂಗತ ದೊರೆ ಛೋಟಾ ರಾಜನ್ ಮತ್ತು ಇತರ ಮೂವರು ಅಧಿಕಾರಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಸಿಬಿಐ ವಕ್ತಾರರಾದ ಆರ್‌.ಕೆ.ಗೌರ್ ತಿಳಿಸಿದ್ದಾರೆ. 
 
ರಾಜೇಂದ್ರ ಸದಾಶಿವ್ ನಿಖಲ್ಜೆ ಅಲಿಯಾಸ್ ಛೋಟಾ ರಾಜನ್ ಮತ್ತು ಮೂವರು ಪಾಸ್‌ಪೋರ್ಟ್ ಇಲಾಖೆಯ ನಿವೃತ್ತ, ಮಾಜಿ ಅಧಿಕಾರಿಗಳಾದ ಜಯ್ ಶ್ರೀ ರಹಾಟೆ, ದೀಪಕ್ ನಟ್ವರ್‌ಲಾಲ್ ಶಾ ಮತ್ತು ಲಲಿತಾ ಲೇಮೋನ್ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿದೆ. 
 
ಆರೋಪಿಗಳ ವಿರುದ್ಧ ಅಪರಾಧಿಕ ಸಂಚು, ವಂಚನೆ, ಖೋಟಾ ಪಾಸ್‌ಪೋರ್ಟ್ ತಯಾರಿಕೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಆರೋಪಗಳನ್ನು ಹೊರಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
 
ಕಳೆದ 2015ರ ಅಕ್ಟೋಬರ್ 25 ರಂದು ಆಸ್ಟ್ರೇಲಿಯಾದಿಂದ ಆಗಮಿಸಿದ ಛೋಟಾ ರಾಜನ್‌ನನ್ನು ಇಂಡೋನೇಷ್ಯಾ ಪೊಲೀಸರು ಬಾಲಿ ನಗರದಲ್ಲಿ ಬಂಧಿಸಿದ್ದರು. ನವೆಂಬರ್ 6 ರಂದು ಇಂಡೋನೇಷ್ಯಾ ಅಧಿಕಾರಿಗಳು ಛೋಟಾ ರಾಜನ್‌ನನ್ನು ಭಾರತ ಸರಕಾರಕ್ಕೆ ಹಸ್ತಾಂತರಿಸಿದ್ದರು.ಸದ್ಯಕ್ಕೆ ರಾಜನ್‌‌ನನ್ನು ತಿಹಾರ್ ಜೈಲಿನಲ್ಲಿಡಲಾಗಿದೆ.  

ವೆಬ್ದುನಿಯಾವನ್ನು ಓದಿ