ಬಾಲ್ಯವಿವಾಹ ರೇಪ್‌ಗಿಂತಲೂ ಹೇಯ ಕೃತ್ಯ: ದೆಹಲಿ ಕೋರ್ಟ್

ಬುಧವಾರ, 10 ಸೆಪ್ಟಂಬರ್ 2014 (13:52 IST)
ಬಾಲ್ಯವಿವಾಹ ಅತ್ಯಾಚಾರಕ್ಕಿಂತಲೂ ಹೇಯ ಕೃತ್ಯವಾಗಿದೆ. ಇದನ್ನು ಸಮಾಜದಿಂದ ನಿರ್ಮೂಲನೆಗೊಳಿಸುವುದು ಅನಿವಾರ್ಯವಾಗಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
 
ಪುತ್ರಿಗೆ ಬಾಲ್ಯವಿವಾಹ ಮಾಡಿಕೊಟ್ಟ ಪೋಷಕರು, ಆಕೆಯ ಪತಿಯ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ದಾಖಲಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಬಾಲ್ಯವಿವಾಹ ಅತ್ಯಾಚಾರಕ್ಕಿಂತ ಹೀನವಾಗಿದೆ ಎಂದು ಅಭಿಪ್ರಾಯಪಟ್ಟಿತು.
 
ನ್ಯಾಯಮೂರ್ತಿ ಶಿವಾನಿ ಚೌಹಾನ್ ನೇತೃತ್ವದ ಪೀಠ, ವರದಕ್ಷಿಣೆ ಕೊಡುವುದು ಮತ್ತು ತೆಗೆದುಕೊಳ್ಳುವುದು ಕೂಡಾ ಅಪರಾಧವಾಗಿದೆ. ಆರೋಪಿಗಳ ವಿರುದ್ಧ ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಕರಣವನ್ನು ಕೂಡಾ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ. 
 
ಬಾಲ್ಯವಿವಾಹ ನೆರವೇರಿಸುವ ಪೋಷಕರ ವಿರುದ್ಧ ಸರಕಾರಗಳು ಸೂಕ್ತ ಸಮಯದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ನಿರ್ಮೂಲನೆಗೊಳಿಸಲು ಸಾಧ್ಯವಾಗುವುದಿಲ್ಲ. ಬಾಲ್ಯ ವಿವಾಹವೆಂಬ ಭೂತ ಅತ್ಯಾಚಾರಕ್ಕಿಂತಲೂ ಕೆಟ್ಟದಾಗಿದೆ. ಇದನ್ನು ಸಮಾಜದಿಂದ ಅಳಿಸಿಹಾಕಲೇಬೇಕು ಎಂದು ನ್ಯಾಯಮೂರ್ತಿ ಚೌಹಾನ್ ತಿಳಿಸಿದ್ದಾರೆ.
 
ದೇಶದಲ್ಲಿ ಬಾಲ್ಯವಿವಾಹಗಳು ನಿರಂತರವಾಗಿ ಮುಂದುವರಿಯುತ್ತಿದ್ದರೆ ಕೋರ್ಟ್ ಮೂಕಪ್ರೇಕ್ಷಕವಾಗಿರಲು ಸಾಧ್ಯವಿಲ್ಲ. ದಕ್ಷಿಣ ದೆಹಲಿಯ ಪೊಲೀಸ್ ಆಯುಕ್ತರು ಮುಂದಿನ ಅಕ್ಟೋಬರ್ 19 ರೊಳಗೆ ದಕ್ಷಿಣ ದೆಹಲಿಯಲ್ಲಿ ನಡೆದ ಬಾಲ್ಯವಿವಾಹಗಳ ಬಗ್ಗೆ ಕೋರ್ಟ್‌ಗೆ ಸಂಪೂರ್ಣ ವರದಿಯನ್ನು ಸಲ್ಲಿಸಬೇಕು ಎಂದು ಆದೇಶಿಸಿದ್ದಲ್ಲದೇ ಬಾಲಕಿಯ ಪೋಷಕರು ಕೂಡಾ ಗಂಬೀರವಾದ ತಪ್ಪೆಸಗಿದ್ದಾರೆ ಎಂದು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.   
 
 

ವೆಬ್ದುನಿಯಾವನ್ನು ಓದಿ