ಚೀನಾ ಅಧ್ಯಕ್ಷರ ಭಾರತ ಭೇಟಿ: ಟಿಬೆಟಿಯನ್ನರ ಪ್ರತಿಭಟನೆ

ಬುಧವಾರ, 17 ಸೆಪ್ಟಂಬರ್ 2014 (16:37 IST)
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಭಾರತಕ್ಕೆ  ಭೇಟಿ ನೀಡುತ್ತಿರುವುದನ್ನು ವಿರೋಧಿಸಿ ಚೀನೀ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹತ್ತು ಮಂದಿ ಟಿಬೆಟಿಯನ್ನರನ್ನು ಪೊಲೀಸರು ಬಂಧಿಸಿದ್ದಾರೆ.

ಟಿಬೆಟನ್ನು ಚೀನಾದಿಂದ ಸ್ವತಂತ್ರಗೊಳಿಸುವಂತೆ ಆಗ್ರಹಿಸಿದ ಟಿಬೆಟಿಯನ್ನರು ಬೆಳಗ್ಗೆ 11.30ರ ಸುಮಾರಿಗೆ  ಧರಣಿ ನಡೆಸಿದರು. 
 
''ಕ್ಸಿ ಅವರ ಭಾರತ ಭೇಟಿಯನ್ನು ನಾವು ವಿರೋಧಿಸುತ್ತೇವೆ. ಟಿಬೆಟ್‌ನಲ್ಲಿ ಚೀನಾದವರು ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತಿದ್ದು, ಚೀನಾ ಹಿಡಿತದಿಂದ ಟಿಬೆಟ್‌‌ ಬಿಡುಗಡೆಯಾಗಬೇಕು  ಎಂದು ನಾವು ಬಯಸುತ್ತೇವೆ'' ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
 
ಟಿಬೆಟಿಯನ್ನರ ವಿರೋಧ ಆರಂಭವಾಗುತ್ತಿದ್ದಂತೆ ಚೀನಾ ದೂತಾವಾಸದ ಸುತ್ತಮುತ್ತ ಪೊಲೀಸರು ಬಿಗಿಭದ್ರತೆಯನ್ನು ಕೈಗೊಂಡಿದ್ದಾರೆ. '' ಈ ಸಂದರ್ಭದಲ್ಲಿ ಕೆಲವರು ದೂತಾವಾಸದ ಒಳಪ್ರವೇಶಿಸಿಲು ಯತ್ನಿಸಿದರು. ಅವರನ್ನು  ತಡೆಯಲಾಯಿತು. ಹತ್ತು ಟಿಬೆಟಿಯನ್ನರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ'' ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 
ಉತ್ತರ ದೆಹಲಿಯ ಮಜ್ನು ಕಾ ತಿಲಾ ಪ್ರದೇಶದಲ್ಲು ಕೂಡ ಟಿಬೆಟಿಯನ್ನರು ವಿರೋಧ ಪ್ರದರ್ಶನ ಮಾಡುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ