ಧೂಮಪಾನಿಗಳಿಗೆ ಮತ್ತೊಂದು ಕಹಿಸುದ್ದಿ: ವಯೋಮಿತಿ ಆಗಲಿದೆ 25

ಮಂಗಳವಾರ, 19 ಆಗಸ್ಟ್ 2014 (15:12 IST)
ಸಿಗರೇಟಿನ ದರ ದುಬಾರಿಯಾದ ನಂತರ ಧೂಮಪಾನಿಗಳಿಗೆ ಮತ್ತೊಂದು ಕಹಿ ಸುದ್ದಿ ಎದುರಾಗಿದೆ. ಧೂಮಿಪಾನಕ್ಕೆ ವಯೋಮಿತಿಯನ್ನು ಮೋದಿ ಸರ್ಕಾರ ಶೀಘ್ರದಲ್ಲೇ ನಿರ್ಧರಿಸಲಿದೆ. ನೀವು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾದರೆ ಸಿಗರೇಟಿನ ಬಳಿಯೂ ಸುಳಿಯಬೇಡಿ. ಏಕೆಂದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲೇ ತಂಬಾಕು ಉತ್ಪನ್ನಗಳ ಸೇವನೆಗೆ ಕಡಿವಾಣ ಹಾಕಲು ಯತ್ನಿಸುತ್ತಿದೆ.

ಸಿಗರೇಟಿನ ಮೇಲೆ ತೆರಿಗೆ ಹೆಚ್ಚಳ ಮತ್ತು ತಂಬಾಕು ಉತ್ಪನಗಳ ಮಾರಾಟವನ್ನು ದೇಶವ್ಯಾಪಿ ನಿಷೇಧಿಸಬೇಕೆಂಬ ಕರೆ ನಡುವೆ, ಸಿಗರೇಟು ಪ್ಯಾಕೆಟ್ ಮೇಲೆ ಬ್ರಾಂಡಿಂಗ್ ನಿಷೇಧಕ್ಕೆ, ಧೂಮಪಾನಕ್ಕೆ ವಯೋಮಿತಿಯನ್ನು  ಪ್ರಸಕ್ತ 18ರಿಂದ 25 ವರ್ಷಗಳಿಗೆ ಏರಿಕೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ಹೆಚ್ಚಿನ ದಂಡ ವಿಧಿಸಲು ಪರಿಶೀಲನೆ ನಡೆಸುತ್ತಿದೆ.  ಆರೋಗ್ಯ ಸಚಿವ ಹರ್ಷ ವರ್ದನ್ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನ ಕಾಯ್ದೆಗೆ ಬದಲಾವಣೆಗಳಿಗೆ ಸಲಹೆ ಮಾಡುವುದಕ್ಕೆ ಸಮಿತಿಯನ್ನು ರಚಿಸಿದ್ದಾರೆ.

ಈ ತಿಂಗಳಾಂತ್ಯದಲ್ಲಿ ವರದಿ ಹೊರಬೀಳಲಿದೆ. ಸುಪ್ರೀಂಕೋರ್ಟ್ ಕಳೆದವಾರ ಸಿಗರೇಟು ಮತ್ತು ಬೀಡಿಗಳಿಗೆ ನಿಷೇಧ ವಿಧಿಸಬೇಕೆಂಬ ಪಿಐಎಲ್ ಸಲ್ಲಿಸಿರುವ ಕುರಿತು ಕೇಂದ್ರ ಮತ್ತು ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದೆ. ಶಿಕ್ಷಣ ಸಂಸ್ಥೆಗಳ ಬಳಿ ಬೀಡಿ, ಸಿಗರೇಟು ಮಾರಾಟಕ್ಕೆ ಈಗಾಗಲೇ ನಿಷೇಧ ವಿಧಿಸಿದ್ದು, 18 ವರ್ಷಕ್ಕಿಂತ ಕಡಿಮೆಯಿರುವವರಿಗೆ ಅದನ್ನು ಮಾರುವಂತಿಲ್ಲ.

ವೆಬ್ದುನಿಯಾವನ್ನು ಓದಿ