ಉಮಾ ಭಾರತಿ ವಿರುದ್ಧ ಬಂಧನ ವಾರಂಟ್

ಶುಕ್ರವಾರ, 30 ಸೆಪ್ಟಂಬರ್ 2016 (16:29 IST)
ಕೇಂದ್ರ ಜಲಸಂಪನ್ಮೂಲ ಖಾತೆ ಸಚಿವೆ ಉಮಾ ಭಾರತಿ ಅವರ ವಿರುದ್ಧ ಭೋಪಾಲ್‌ನ ಸ್ಥಳೀಯ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

ಬರೊಬ್ಬರಿ 13 ವರ್ಷಗಳ ಹಿಂದೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಉಮಾ ಭಾರತಿ ಅವರನ್ನು ಬಂಧಿಸುವಂತೆ ಚೀಫ್ ಜ್ಯುಡಿಸಿಯಲ್ ಮ್ಯಾಜಿಸ್ಟೇಟ್ ಭು ಭಾಸ್ಕರ್ ವಾರಂಟ್ ಜಾರಿ ಮಾಡಿದ್ದಾರೆ. 
 
ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸಂಧಾನ ಸಭೆಯಲ್ಲಿ ಭಾಗವಹಿಸಬೇಕಾಗಿದ್ದರಿಂದ ವಿಚಾರಣೆಗೆ ವಿನಾಯಿತಿ ನೀಡಿ ಎಂದು ಉಮಾ ಭಾರತಿ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಕೋರ್ಟ್ ಅವರನ್ನು ಬಂಧಿಸಿ ಕರೆ ತರುವಂತೆ ಪೊಲೀಸರಿಗೆ ಸೂಚಿಸಿದೆ. 
 
ಕಳೆದ 13 ವರ್ಷದಲ್ಲಿ ಅವರಿಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಆದರೆ ಅವರು ವಿಚಾರಣೆಗೆ ಹಾಜರಾಗುತ್ತಿಲ್ಲ. ಈಗ ಮತ್ತೆ ಕಾಲಾವಕಾಶ ನೀಡಲಾಗುವುದಿಲ್ಲ ಎಂದಿರುವ ಕೋರ್ಟ್ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 19ಕ್ಕೆ ನಿಗದಿ ಪಡಿಸಿದೆ. 
 
2003ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಉಮಾ, ಸಿಂಗ್ ಆಡಳಿತಾವಧಿಯಲ್ಲಿ  ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು.
 

ವೆಬ್ದುನಿಯಾವನ್ನು ಓದಿ