ಅಖಿಲೇಶ್ ಜತೆ ರಾಹುಲ್ ಸೈಕಲ್ ಸವಾರಿ ನಿಶ್ಚಿತ!

ಬುಧವಾರ, 18 ಜನವರಿ 2017 (09:06 IST)
ಅಪ್ಪನಿಗೆ ಮಣ್ಣುಮುಕ್ಕಿಸಿ ಸೈಕಲ್ ಚಿಹ್ನೆಯನ್ನು ತನ್ನಾದಾಗಿಸಿಕೊಂಡು ಬೀಗುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಅಧ್ಯಕ್ಷ  ಅಖಿಲೇಶ್ ಯಾದವ್ ಸಮಾನ ಮನಸ್ಕರ ಜತೆಯಲ್ಲಿ ಸೇರಿಕೊಂಡು ಮಹಾಮೈತ್ರಿ ರೂಪಿಸಲಾಗುವುದು ಎಂದು ಹೇಳಿದ್ದಾರೆ. ಅವರ ಜತೆಗೆ ಕೈ ಜೋಡಿಸುತ್ತಿರುವುದಾಗಿ ಕಾಂಗ್ರೆಸ್ ಈಗಾಗಲೇ ಘೋಷಿಸಿದ್ದು ಇಂದು ಅಖಿಲೇಶ್ ಈ ಕುರಿತು ಘೋಷಣೆ ಮಾಡುವ ಸಾಧ್ಯತೆಗಳಿವೆ. 

 
ಸೈಕಲ್ ಚಿಹ್ನೆ ತಮ್ಮ ಪರವಾಗಿರುವುದು ಅಖಿಲೇಶ್ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ. ಪಕ್ಷದೊಳಗಿನ ಸಂಘರ್ಷದಲ್ಲಿ ತಮ್ಮ ಬಣದ ಪರವಾಗಿ ಚುನಾವಣಾ ಆಯೋಗ ತೀರ್ಪು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅಖಿಲೇಶ್ ಮಹಾಮೈತ್ರಿಯ ಬಗ್ಗೆ ಸದ್ಯದಲ್ಲೇ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ. 
 
ಆದರೆ ರಾಹುಲ್ ಗಾಂಧಿ ಜತೆ ವೇದಿಕೆ ಹಂಚಿಕೊಳ್ಳುವಿರಾ ಎಂಬ ಪ್ರಶ್ನೆಗೆ ಅವರು ಸ್ಪಷ್ಟವಾಗಿ ಉತ್ತರಿಸಿಲ್ಲ. ಮೈತ್ರಿ ಮಾತುಕತೆ ಅಂತಿಮ ಹಂತದಲ್ಲಿದ್ದು ಬುಧವಾರ ಈ ಕುರಿತು ಘೋಷಣೆಯಾಗುವ ಸಾಧ್ಯತೆಗಳಿವೆ ಎಂದು ಎಸ್‌ಪಿ ಮೂಲಗಳು ತಿಳಿಸಿವೆ. 
 
ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಲೋಕದಳದ ನಡುವೆ ಮಹಾಮೈತ್ರಿ ಏರ್ಪಡಲಿದ್ದು ಪೀಸ್‌ ಪಾರ್ಟಿಯಂತಹ ಸಣ್ಣಪುಟ್ಟ ಪಕ್ಷಗಳೂ ಮೈತ್ರಿಗೆ ಸೇರಬಹುದು ಎನ್ನಲಾಗುತ್ತಿದೆ. 
 
ಎಸ್‌ಪಿ ಜತೆಗಿನ ಮೈತ್ರಿ ಮಾಡಿಕೊಳ್ಳಲಾಗುವುದು, ಅಖಿಲೇಶ್ ನೇತೃತ್ವದಲ್ಲಿ ಚುನಾವಣೆಯನ್ನೆದುರಿಸುತ್ತೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ.
 
ಇನ್ನೊಂದೆಡೆ ಚಿಹ್ನೆ ತಮ್ಮದಾಗಿಸಿಕೊಂಡ ಬಳಿಕ 4 ಗಂಟೆಗಳಲ್ಲಿ ಎರಡು ಬಾರಿ ತಂದೆಯನ್ನು ಭೇಟಿಯಾಗಿರುವ ಅಖಿಲೇಶ್ ನಮ್ಮ ನಡುವೆ ಯಾವುದೇ ರೀತಿಯ ವೈಮನಸ್ಸು ಇಲ್ಲ. ಅಖಂಡ ಸಮಾಜವಾದಿ ಪಕ್ಷವಗಿ ಕಣಕ್ಕಿಳಿಯುವುದಾಗಿ ಪ್ರಕಟಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ