ಕಾಂಗ್ರೆಸ್‌‌ನದು ಉಗ್ರ ಪರ ಮೃದು, ರಾಷ್ಟ್ರೀಯವಾದಿಗಳ ವಿರುದ್ಧ ಕಠಿಣ ಧೋರಣೆ: ಬಿಜೆಪಿ

ಸೋಮವಾರ, 29 ಫೆಬ್ರವರಿ 2016 (12:39 IST)
ಕಾಂಗ್ರೆಸ್ ಸದಾ ಭಯೋತ್ಪಾದಕರ ಪರ ಮೃದು ಮತ್ತು ರಾಷ್ಟ್ರೀಯವಾದಿಗಳ ವಿರುದ್ಧ ಕಠಿಣ ಧೋರಣೆಯನ್ನು ತೋರಿಸುತ್ತ ಬಂದಿದೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ.
 
ಅಲ್ಪಸಂಖ್ಯಾತರಿಗೆ ಅಭದ್ರತೆ ಕಾಡುತ್ತಿಲ್ಲ. ಬದಲಾಗಿ ಕಾಂಗ್ರೆಸ್‌ಗೆ ಅಭದ್ರತೆ ಕಾಡುತ್ತಿದ್ದು, ಹೀಗಾಗಿ ಜಿಎಸ್‌ಟಿ ಮಸೂದೆಗೆ ತಡೆಯೊಡ್ಡಲಾಗುತ್ತಿದೆ. ಜಿಎಸ್‌ಟಿ ಜಾರಿಯಾಗುವುದು ಅವರಿಗೆ ಇಷ್ಟವಿಲ್ಲ. ಕೈ ಪಕ್ಷ ಸದಾ ಉಗ್ರ ಪರ, ರಾಷ್ಟ್ರೀಯತಾವಾದಿಗಳ ವಿರುದ್ಧ ಕಠಿಣ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕಿಡಿಕಾರಿದ್ದಾರೆ. 
 
ಏತನ್ಮಧ್ಯೆ ಜೆಎನ್‌ಯು ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್, ಅಧಿಕಾರಕ್ಕೆ ಬಂದಾಗಿನಿಂದಲೂ ದ್ವೇಷದ ಬೆಂಕಿ ಹೊತ್ತಿಸುವ, ಒಡಕನ್ನುಂಟು ಮಾಡುವಂತಹ ಹೇಳಿಕೆಗಳನ್ನು ನೀಡುತ್ತ ಬಂದಿರುವ ತಮ್ಮ ಪಕ್ಷದ ಸದಸ್ಯರನ್ನು ನಿಗ್ರಹಿಸಲು ಪ್ರಧಾನಿಗೆ ಸಾಧ್ಯವಾಗಿಲ್ಲ. ಹೀಗಾಗಿ ನಡೆದಿರುವ ಘಟನೆಗಳಿಗೆ ಅವರೇ ಜವಾಬ್ದಾರರು ಎಂದು ಹೇಳಿದೆ. 
 
ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಕೈಗೊಂಡ ಕ್ರಮ ಏಕಪಕ್ಷೀಯವೆಂದಿರುವ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್, ಜೆಎನ್‌ಯು ಘಟನೆಗೆ ನೀವು ಮತ್ತು ನಿಮ್ಮ ಸರ್ಕಾರ ಕಾರಣ ಎಂದು ಸರ್ವ ಪಕ್ಷಗಳ ಸಭೆಯಲ್ಲಿ ನಾನು ಪ್ರಧಾನಿಯವರಿಗೆ ನೇರವಾಗಿ ಹೇಳಿದ್ದೇನೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ