ನೋ ವರ್ಕ್ ನೋ ಪೇ ಬಿಜೆಪಿ ಸಚಿವರ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

ಮಂಗಳವಾರ, 4 ಆಗಸ್ಟ್ 2015 (15:41 IST)
ಮುಂಗಾರು ಅಧಿನೇಶನದಲ್ಲಿ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ಸಂಸದರಿಗೆ ನೋ ವರ್ಕ್ ನೋ ಪೇ ಎನ್ನುವ ನೀತಿ ಅನುಸರಿಸಬೇಕು ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಸಲಹೆಗೆ ಕಾಂಗ್ರೆಸ್ ತಿರುಗೇಟು ನೀಡಿ, ಕಾಂಗ್ರೆಸ್ ಸಂಸದರು ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದಿದೆ. 
 
ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಸ್ಟ್ಯಾಂಡಿಂಗ್ ಕಮಿಟಿ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ನಾಳೆ ಭೂ ಸ್ವಾಧೀನ ಮಸೂದೆಯ ಬಗ್ಗೆ ಆಯ್ಕೆ ಸಮಿತಿಯ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ನಾಡಿದ್ದು ಆರೋಗ್ಯ ಇಲಾಖೆಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದೇವೆ. ಆದ್ದರಿಂದ ಸಂಸದರು ಕಠಿಣ ಪರಿಶ್ರಮ ಪಡುತ್ತಿಲ್ಲ ಎನ್ನುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.
 
ಅಧಿಕಾರಿಗಳಿಗೆ ಅನ್ವಯವಾಗುವಂತೆ ಸಂಸದರಿಗೂ ಕೂಡಾ ಕೆಲಸ ಮಾಡಿದಲ್ಲಿ ವೇತನ, ಕೆಲಸ ಮಾಡದಿದ್ದರೆ ವೇತನವಿಲ್ಲ ಎನ್ನುವ ನೀತಿಯನ್ನು ಜಾರಿಗೊಳಿಸಬೇಕು ಕೇಂದ್ರ ಸಚಿವ ಶರ್ಮಾ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಕೋಲಾಹಲ ವೆಬ್ಬಿಸಿದೆ.
 
ವಿಪಕ್ಷಗಳ ಆಕ್ರೋಶಕ್ಕೆ ಮಣಿದ ಬಿಜೆಪಿ, ಸರಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವನೆಯಿಲ್ಲ. ಆದರೆ, ಸರಕಾರ ವಿಷಯದ ಬಗ್ಗೆ ಚರ್ಚಿಸಲು ಸಿದ್ದವಿದೆ ಎಂದು ಸ್ಪಷ್ಟನೆ ನೀಡಿದೆ.
 
ಸಂಸತ್ತಿನ ಕಲಾಪ ಹಾಳುಗೆಡುವಲ್ಲಿ ಬಿಜೆಪಿ ನೇತೃತ್ವದ ಸರಕಾರವೇ ಕಾರಣವಾಗಿದೆ. ರಾಜೀನಾಮೆ ನೀಡುವವರೆಗೆ ಯಾವುದೇ ಚರ್ಚೆ ಸಾಧ್ಯವಿಲ್ಲ ಎಂದು ನಮ್ಮ ನಿಲುವು ಸ್ಪಷ್ಟಪಡಿಸಿದ್ದೇವೆ ಎಂದರು.
 
ಲಲಿತ್‌ಗೇಟ್, ವ್ಯಾಪಂ ಹಗರಣದಲ್ಲಿ ಸಿಲುಕಿದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ಥಾನದ ಸಿಎಂ ವಸುಂಧರಾ ರಾಜೇ, ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಿವೆ. 
 

ವೆಬ್ದುನಿಯಾವನ್ನು ಓದಿ