ಸರ್ದಾರ್ ಪಟೇಲ್, ಶಾಸ್ತ್ರಿ ಕೂಡಾ ನೇತಾಜಿ ವಿರುದ್ಧ ಗೂಢಚಾರಿಕೆ ನಡೆಸಿದ್ದರೆ?; ಬಿಜೆಪಿಗೆ ದಿಗ್ವಿಜಯ್ ಸಿಂಗ್ ತಿರುಗೇಟು

ಶನಿವಾರ, 11 ಏಪ್ರಿಲ್ 2015 (15:12 IST)
ಮಾಜಿ ಪ್ರದಾನಮಂತ್ರಿ ಜವಾಹರ್ ಲಾಲ್ ನೆಹರು ನೇತಾಜಿ ವಿರುದ್ಧ ಗೂಢಚಾರಿಕೆ ಮಾಡಿದ್ದಾರೆ ಎನ್ನುವ ಬಿಜೆಪಿ ಆರೋಪದಿಂದ ಸಿಡಿಮಿಡಿಗೊಂಡ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ನೇತಾಜಿ ಸುಭಾಶ್ ಚಂದ್ರ ಭೋಸ್ ಅವರ ಕುಟುಂಬದ ವಿರುದ್ಧ ಗೂಢಚಾರಿಕೆ ನಡೆದಾಗ ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಕೇಂದ್ರ ಗೃಹ ಸಚಿವರಾಗಿದ್ದರು ಅವರ ವಿರುದ್ಧವೇಕೆ ಆರೋಪ ಮಾಡುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.  

ಪ್ರಧಾನಮಂತ್ರಿ ನರೇಂದ್ರ ಮೋದಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ಗೂಢಚಾರಿಕೆ ನಡೆದಿತ್ತು. ಅದಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ಯಾಕೆ ಹೊಣೆಗಾರರನ್ನಾಗಿಸುತ್ತಿಲ್ಲ ಎಂದು ಗುಡುಗಿದ್ದಾರೆ.

ಸರ್ದಾರ್ ಪಟೇಲ್‌ರ ನಂತರ ಲಾಲ್ ಬಹಾದ್ದೂರ್ ಶಾಸ್ತ್ರಿ, ಜಿ.ಬಿ.ಪಂಥ್ ಮತ್ತು ಕಾಟ್ಜು ಗೃಹ ಸಚಿವರಾಗಿದ್ದರು. ನೆಹರು ನಂತರ ಶಾಸ್ತ್ರಿಯವರು ಪ್ರಧಾನಿಯಾದರು. ಅವರೆಲ್ಲರು ನೇತಾಜಿ ವಿರುದ್ಧ ಗೂಢಚಾರಿಕೆ ಮಾಡಿದ್ದಾರೆಯೇ?  ಗುಜರಾತ್‌ನ ಅಂದಿನ ಗೃಹ ಸಚಿವ ಅಮಿತ್ ಶಾ ಮುಗ್ದ ಮಹಿಳೆಯ ಚಲನವಲನದ ಬಗ್ಗೆ ಗೂಢಚಾರಿಕೆ ನಡೆಸುತ್ತಿರುವಾಗ ಮೋದಿ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.  

ಮಾಜಿ ಪ್ರದಾನಿ ನೆಹರು ನೇತಾಜಿ ವಿರುದ್ಧ 1948 ರಿಂದ 1968 ರವರೆಗೆ ಸುಮಾರು 20 ವರ್ಷಗಳ ಕಾಲ ಗೂಢಚಾರಿಕೆ ನಡೆಸಿದ್ದರು. ನೆಹರು 1964 ರಲ್ಲಿ ಇಹಲೋಕ ತ್ಯಜಿಸಿದ ನಂತರ ಸುಮಾರು ನಾಲ್ಕು ವರ್ಷಗಳ ಕಾಲ ಗೂಢಚಾರಿಕೆ ನಡೆದಿತ್ತು ಎನ್ನುವ ವರದಿ ಬಹಿರಂಗಗೊಂಡಿದೆ.

ಬೋಸ್ ಕುಟುಂಬದ ಸದಸ್ಯರು ಬರೆದ ಪತ್ರಗಳು ಅವರು ಯಾರನ್ನು ಭೇಟಿಯಾಗಿ ಯಾವ ವಿಷಯಗಹಳ ಬಗ್ಗೆ ಚರ್ಚಿಸಿದ್ದಾರೆ ಎನ್ನುವ ಕುರಿತಂತೆ ತನಿಖಾ ಸಂಸ್ಥೆಗಳು ವರದಿಗಳನ್ನು ಸಂಗ್ರಹಿಸಿದ್ದವು. ನೇತಾಜಿಯ ಗೂಢಚಾರಿಕೆ ವರದಿಗಳು ಅಕಸ್ಮಿಕವಾಗಿ ಬಹಿರಂಗವಾಗಿವೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿಕೆ ನೀಡಿರುವ ಮಧ್ಯೆಯೂ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದೆ.

ಏತನ್ಮಧ್ಯೆ, ಬಿಜೆಪಿ ನಾಯಕ ಸಿದ್ಧಾರ್ಥ್ ನಾಥ್ ಸಿಂಗ್ ಮಾತನಾಡಿ, ದಿಗ್ವಿಜಯ್ ಸಿಂಗ್ ವಿಷಯವನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ. ಮಹತ್ವದ ವ್ಯಕ್ತಿಗಳ ವಿರುದ್ಧ ಗೂಢಚಾರಿಕೆ ಮಾಡುವುದು ಕಾಂಗ್ರೆಸ್ ರಕ್ತದ ಕಣದಲ್ಲಿ ಬಂದಿದೆ. ನೇತಾಜಿ ವಿರುದ್ಧ ಯಾಕೆ ಗೂಢಚಾರಿಕೆ ಕೈಗೊಳ್ಳಲಾಯಿತು ಎನ್ನುವ ಬಗ್ಗೆ ಕಾಂಗ್ರೆಸ್ ವಿವರಣೆ ನೀಡಲಿ ಎಂದು ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ