ವೇದಿಕೆಯನ್ನು ಬಹಿಷ್ಕರಿಸಲು ಸಿಎಂಗಳಿಗೆ ಸೂಚನೆ ನೀಡಿ ಕಾಂಗ್ರೆಸ್ ಮೋದಿಗೆ ಅವಮಾನ ಮಾಡುತ್ತಿದೆ: ಬಿಜೆಪಿ

ಗುರುವಾರ, 21 ಆಗಸ್ಟ್ 2014 (15:56 IST)
ಪ್ರಧಾನಿ ನರೇಂದ್ರ ಮೋದಿಯವರ ಜತೆ  ವೇದಿಕೆ ಹಂಚಿಕೊಳ್ಳಬೇಡಿ ಎಂದು ತಮ್ಮ ಪಕ್ಷದ ಮುಖ್ಯಮಂತ್ರಿಗಳಿಗೆ ಕೈ ಪಕ್ಷ ಸೂಚನೆ ನೀಡಿರುವುದರ ವಿರುದ್ಧ ಆಡಳಿತ ಪಕ್ಷ ಬಿಜೆಪಿ ಕಾಂಗ್ರೆಸ್‌ಗೆ ಛೀಮಾರಿ ಹಾಕಿದೆ

ಕಾಂಗ್ರೆಸ್ ಪ್ರಧಾನಮಂತ್ರಿಗೆ ಅವಮಾನ ಮಾಡುತ್ತಿದೆಯಲ್ಲದೇ, ಈ ರೀತಿಯ ನಿರ್ದೇಶನಗಳನ್ನು ನೀಡುವ ಮೂಲಕ ಸಾಂವಿಧಾನಿಕ ಔಚಿತ್ಯವನ್ನು ಉಲ್ಲಂಘಿಸುತ್ತಿದೆ ಎಂದು ಕೇಸರಿ ಪಕ್ಷ ಕಿಡಿಕಾರಿದೆ.
 
ಕೈಥಲ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ  ಮೋದಿಯವರ ಜತೆ ವೇದಿಕೆ ಹಂಚಿಕೊಂಡ ಹರಿಯಾಣಾದ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ  ಅವರು ಜನಸಮೂಹದಿಂದ ಅಪಹಾಸ್ಯಕ್ಕೆ ಗುರಿಯಾದ ಘಟನೆ ವರದಿಯಾದ ತರುವಾಯ ಕಾಂಗ್ರೆಸ್ ತಮ್ಮ ಪಕ್ಷದ ಮುಖ್ಯಮಂತ್ರಿಗಳಿಗೆ ಈ ನಿರ್ದೇಶನ ನೀಡಿದೆ. 
 
ಈ ಬೆಳವಣಿಗೆ ಹಿನ್ನೆಲೆಯಲ್ಲಿ  ಇಂದು ನಡೆಯುತ್ತಿರುವ ನಾಗ್ಪುರ್ ಮೆಟ್ರೋ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್  ನಿರ್ಧರಿಸಿದ್ದರೆ, ಹೂಡಾ ಕೂಡ ಮತ್ತೊಮ್ಮೆ ಮೋದಿಯವರ ಜತೆ  ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸದಿರುವ ನಿಲುವಿಗೆ ಬಂದಿದ್ದಾರೆ. 
 
ಹರಿಯಾಣಾದಲ್ಲಿ ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ  ಈ ರೀತಿಯ ಘಟನೆಗಳು ತಮ್ಮ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸರಕಾರ ಮತ್ತು ಮುಖ್ಯಮಂತ್ರಿಗಳ ಬಗ್ಗೆ ಜನರಿಗಿರುವ ಆಕ್ರೋಶವನ್ನು ಪ್ರತಿಬಿಂಬಿಸುತ್ತವೆ. ಯುಪಿಎ ಸರಕಾರ ಅಸ್ತಿತ್ವದಲ್ಲಿದ್ದಾಗ ಬಿಜೆಪಿ ಮುಖ್ಯಮಂತ್ರಿಗಳು ಕಾಂಗ್ರೆಸ್ ಪ್ರಧಾನಿ ಮನ್ ಮೋಹನ್ ಸಿಂಗ್ ಜತೆಗಿನ  ಸಮಾರಂಭಗಳಿಂದ ತಮ್ಮನ್ನು ತಾವು ಬಹಿಷ್ಕರಿಸಿಕೊಂಡಿರಲಿಲ್ಲ. ಅತಿ ಹಳೆಯ ಪಕ್ಷ ಪ್ರಧಾನಿ ಮೋದಿಯವರ ಜತೆ ವೇದಿಕೆ ಹಂಚಿಕೊಳ್ಳುವುದರಿಂದ ದೂರ ಓಡಬಹುದು. ಆದರೆ ಅವರ ಜನಪ್ರಿಯತೆಯಿಂದ ದೂರ ಓಡಲಾಗದು  ಎಂದಿದೆ. 
 
ಈ ಪ್ರಕರಣದಲ್ಲಿ  ರಾಜಕೀಯದಾಟವನ್ನು ಆಡದಂತೆ ಬಿಜೆಪಿ ವಕ್ತಾರ ನಲಿನ್ ಕೊಹ್ಲಿ  ಕಾಂಗ್ರೆಸ್ ಪಕ್ಷವನ್ನು ಕೋರಿದ್ದಾರೆ. 
 
"ಪ್ರಧಾನಿ ಮೋದಿ, ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಗಳು ರಾಜಕೀಯ ಮಾಡಬಾರದು ಎಂದು" ಕೊಹ್ಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ