ಲಲಿತ್ ಮೋದಿ ವಿವಾದ: ಯುಪಿಎ ಸರಕಾರ ಇಂಟರ್‌ಪೋಲ್ ಸಂಪರ್ಕಿಸುವಲ್ಲಿ ವಿಫಲ

ಬುಧವಾರ, 24 ಜೂನ್ 2015 (13:24 IST)
ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ವಿರುದ್ಧ ಇದೀಗ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್, ತಾನೇ ಹಾಕಿದ ಬಲೆಯಲ್ಲಿ ಬೀಳುವಂತಾಗಿದೆ. 
 
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಲಲಿತ್ ಮೋದಿ ವಿರುದ್ಧ ಇಂಟರ್‌ಪೋಲ್‌ಗೆ ಸಂಪರ್ಕಿಸುವಲ್ಲಿ ವಿಫಲವಾಗಿತ್ತು ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.
 
ಕಳೆದ 2010ರಲ್ಲಿ ಭಾರತದಿಂದ ಇಂಗ್ಲೆಂಡ್‌ಗೆ ಲಲಿತ್ ಮೋದಿ ತೆರಳಿದ ನಂತರ ಆತನ ವಿರುದ್ಧ ಭ್ರಷ್ಟಾಚಾರ, ಹವಾಲಾ ಹಗರಣ, ಹಣ ದುರುಪಯೋಗ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿದ್ದವು, ಬ್ಲ್ಯೂ ನೋಟಿಸ್ ಕೂಡಾ ನೀಡಲಾಗಿತ್ತು ಎನ್ನಲಾಗಿದೆ. 
 
ಆದಾಗ್ಯೂ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಲಲಿತ್ ಮೋದಿ ವಿರುದ್ಧ ಇಂಟರ್‌ಪೋಲ್ ಸಂಪರ್ಕಿಸಲು ವಿಫಲವಾಗಿತ್ತು ಎಂದು ಮೂಲಗಳು ತಿಳಿಸಿವೆ.
 
ಮಾಧ್ಯಮಗಳೊಂದಿಗೆ ಮಾಜಿ ಇಂಟರ್‌ಪೋಲ್ ಅಧಿಕಾರಿ ರೋನಾಲ್ಡ್ ಕೆ.ನೊಬ್ಲೆ ಮಾತನಾಡಿ, ಲಲಿತ್ ಮೋದಿ ವಿರುದ್ಧ ನೋಟಿಸ್ ಹೊರಡಿಸಲು ಅನುವಾಗುವಂತೆ ಯುಪಿಎ ಸರಕಾರ ಯಾವತ್ತೂ ಇಂಟರ್‌ಪೋಲ್‌ ಅಧಿಕಾರಿಗಳನ್ನು ಸಂಪರ್ಕಿಸಿಲ್ಲ ಎಂದು ಆರೋಪಿಸಿದರು.  
 
ಯುಪಿಎ ಸರಕಾರ ಇಂಟರ್‌ಪೋಲ್ ಅಧಿಕಾರಿಗಳನ್ನು ಸಂಪರ್ಕಿಸಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದಲ್ಲಿ ಮೋದಿಯನ್ನು ಹೆಡೆಮುರಿಕಟ್ಟಿ ಭಾರತಕ್ಕೆ ವಾಪಸ್ ತರಬಹುದಿತ್ತು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ  
 

ವೆಬ್ದುನಿಯಾವನ್ನು ಓದಿ